Success story Of Farmer Annappa ತರಕಾರಿ ಬೆಳೆಯ ಜೊತೆಗೆ, ಕುರಿ-ಮೇಕೆ, ಕೋಳಿ, ಹೈನುಗಾರಿಕೆ, ಮೀನುಸಾಕಣೆ ಮಾಡುವ ಮೂಲಕ ಸಮಗ್ರ ಕೃಷಿಯಲ್ಲಿ ಯಶಸ್ವಿಯಾದ ಅಣ್ಣಪ್ಪ ಅವರ ಯಶೋಗಾಥೆ.
Success Story Of Farmer Annappa ಇತ್ತೀಚಿನ ದಿನಗಳಲ್ಲಿ ಜನರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ಏಕೆಂದರೆ, ಹೆಚ್ಚಿನವರಿಗೆ ವ್ಯವಸಾಯದಲ್ಲಿ ತೊಡಗಿಕೊಳ್ಳುವ ಆಸಕ್ತಿ ಕಡಿಮೆಯಾಗಿರುವುದು. ಕೃಷಿ ಮಾಡುವ ಆಸಕ್ತಿ ಕಳೆದುಕೊಳ್ಳಲು ಇರುವ ಮುಖ್ಯ ಕಾರಣ ಎಂದರೆ, ಕೃಷಿಯಿಂದ ಹೆಚ್ಚಿನ ಆದಾಯ ಬರುವುದಿಲ್ಲ, ಬದಲಾಗಿ ಸಾಲವೇ ಹೆಚ್ಚಾಗುತ್ತದೆ ಎನ್ನುವ ತಪ್ಪು ಕಲ್ಪನೆ. ವ್ಯವಸಾಯ ಎಂದು ವರ್ಷಪೂರ್ತಿ ಕಷ್ಟಪಡುವುದಕ್ಕಿಂತ, ಪಟ್ಟಣಕ್ಕೆ ಹೋಗಿ ತಿಂಗಳು ತಿಂಗಳು ಬರುವ ಸಂಬಳವನ್ನೇ ನಂಬಿ ಜೀವನ ನಡೆಸಬಹುದು ಎನ್ನುವ ಮನಸ್ಥಿತಿಯ ಜೊತೆಗೆ ಕೃಷಿಯನ್ನು ನಂಬಿ ಜೀವನ ನಡೆಸುವುದಕ್ಕೆ ಸಾಧ್ಯವೇ ಇಲ್ಲ ಎಂದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಈ ರೈತನ ಬಗ್ಗೆ ತಿಳಿದರೆ ನೀವು ಅಚ್ಚರಿಪಡೋದು ಖಂಡಿತ. ಏಕೆಂದರೆ, ಈ ಯುವಕ ಬೆಂಗಳೂರಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದರೂ, ಅದನ್ನು ತೊರೆದು ತನ್ನ ಹುಟ್ಟೂರಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಸಮಗ್ರ ಕೃಷಿ ಪದ್ದತಿಯನ್ನು ಅನುಸರಿಸಿ ಯಶಸ್ಸು ಕಂಡಿದ್ದಾರೆ.
ಹೌದು, ಇವರ ಹೆಸರು ಅಣ್ಣಪ್ಪ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಲಗುಂದ ಗ್ರಾಮದವರು. ಇವರು ಪಿಯುಸಿ, ಐಟಿಐ ವಿದ್ಯಾಭ್ಯಾಸದ ನಂತರ, ಊರಿನಲ್ಲಿದ್ದು ಮಾಡಲು ಏನು ಕೆಲಸವಿದೆ ಎನ್ನುವ ಮನೋಭಾವದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಹೋದರು. ವಿಪ್ರೋ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸಿದ ಕೆಲ ಸಮಯದ ನಂತರ, ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದು ಇಷ್ಟವಾಗದೇ ತಮ್ಮ ಹುಟ್ಟೂರಿಗೆ ವಾಪಸಾಗುತ್ತಾರೆ. ತನ್ನ ಊರಲ್ಲಿಯೇ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತಿದ್ದ ಇವರಿಗೆ, ಮೊದಲು ಹೊಳೆದದ್ದು ಕುರಿ-ಮೇಕೆ ಸಾಕಣೆ ಮಾಡುವ ಯೋಜನೆ.
ಕರ್ನಾಟಕದಲ್ಲಿ ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಪ್ರತಿ ಕೆಜಿಗೆ ಮೇಕೆ ಮಾಂಸದ ಬೆಲೆಯೂ ಪ್ರತಿ ತಿಂಗಳು ಹೆಚ್ಚುತ್ತಿದೆ. ಮೇಕೆ ಮಾಂಸದ ಬೆಲೆಯಲ್ಲಿ ಯಾವುದೇ ಏರಿಳಿತ ಅಥವಾ ಕುಸಿತ ನೋಡಲು ಸಿಗುವುದು ಕಡಿಮೆ. ಕುರಿ ಮಾಂಸದ ಬೆಲೆ ಯಾವಾಗಲೂ ಏರಿಕೆಯಲ್ಲಿರುತ್ತದೆ. ಪ್ರಸ್ತುತ, ಬೆಂಗಳೂರಿನಲ್ಲಿ, ಮೇಕೆ ಮಾಂಸದ ಬೆಲೆ ಪ್ರತಿ ಕೆಜಿಗೆ 550 ರೂಗಳು ಮತ್ತು ಮುಂದಿನ ಒಂದೆರಡು ವರ್ಷಗಳಲ್ಲಿ ಇದು 600 ರಿಂದ 700 ರವರೆಗೆ ಇರುತ್ತದೆ. ಹಾಗಾಗಿ ಕುರಿ-ಮೇಕೆ ಸಾಕಾಣಿಕೆ ಯಾವಾಗಲೂ ಲಾಭದಾಯಕ ವ್ಯವಹಾರವಾಗಿರುತ್ತದೆ ಎಂದು ಯೋಚಿಸಿ ಇವರು ಈ ವ್ಯವಹಾರಕ್ಕೆ ಕೈ ಹಾಕಿ ಯಶಸ್ವಿಯಾದರು. ಆದರೆ ಕುರಿ ಮೇಕೆ ಸಾಕಣೆಯಿಂದ ಆದಾಯ ಪಡೆಯಲು ಕಡಿಮೆ ಎಂದರೂ ಒಂದು ವರ್ಷ ಕಾಯಬೇಕಾಗುತ್ತದೆ. ಈ ಕಾರಣದಿಂದಾಗಿ, ಕುರಿ ಮೇಕೆ ಜೊತೆಗೆ ಕೋಳಿ ಸಾಕಣೆಯನ್ನೂ ಪ್ರಾರಂಭಿಸಲು ಯೋಚಿಸುತ್ತಾರೆ.
ಹಾಗಾಗಿ, ಕುರಿ ಮೇಕೆಯ ಜತೆಗೆ ನಾಟಿ ಕೋಳಿ ಸಾಕನೆಯನ್ನು ಆರಂಭಿಸುತ್ತಾರೆ. ಕೆ.ಜಿ.ಗೆ ರೂ. 400 ಮತ್ತು ಒಂದು ಮೊಟ್ಟೆಗೆ ರೂ.10ರಂತೆ ಮಾರಾಟ ಮಾಡುತ್ತಾರೆ. ಜೋಳ ಮತ್ತು ಚಕ್ಕೆಯನ್ನು ಮಿಶ್ರಣ ಮಾಡಿ ನೀಡುತ್ತಾರೆ. ಪೂರ್ಣ ಸಮಯ ಮತ್ತು ಅರೆಕಾಲಿಕ ವ್ಯಾಪಾರವನ್ನು ಹುಡುಕುತ್ತಿರುವವರಿಗೆ ಕೋಳಿ ಸಾಕಣೆ ಒಂದು ಉತ್ತಮ ಅವಕಾಶ. ಕೋಳಿ ವ್ಯಾಪಾರದಲ್ಲಿ ಮಾರ್ಕೆಟಿಂಗ್ ಅಗತ್ಯವಿಲ್ಲ, ಏಕೆಂದರೆ ಸಗಟು ವ್ಯಾಪಾರಿಗಳಿಂದ ಕೃಷಿ ಮತ್ತು ಖರೀದಿಗೆ ಹೆಚ್ಚಿನ ಬೇಡಿಕೆ ಯಾವಾಗಲೂ ಇರುತ್ತದೆ. ಮೊಟ್ಟೆ ಮತ್ತು ಕೋಳಿ ಮಾಂಸವು ಪ್ರೋಟೀನ್ ಮತ್ತು ಅಮೈನೋ ಆಸಿಡ್ಗಳ ಉತ್ತಮ ಮೂಲವಾಗಿದೆ, ಇದು ಇತರ ಮಾಂಸಕ್ಕೆ ಹೋಲಿಸಿದರೆ ಕಡಿಮೆ ಕೊಲೆಸ್ಟ್ರಾಲ್ ಹೊಂದಿರುತ್ತದೆ ಹಾಗಾಗಿ ಕೋಳಿ ಮಾಂಸ ಮತ್ತು ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಹಾಗಾಗಿ, ಕೋಳಿ ಮಾಂಸವನ್ನು ಸ್ಥಳೀಯವಾಗಿ ವ್ಯಾಪಕವಾಗಿ ಸೇವಿಸಲಾಗುತ್ತದೆ ಮತ್ತು ರಫ್ತು ಕೂಡ ಮಾಡಬಹುದು. ಚಿಕನ್ ಇತರ ಮಾಂಸಕ್ಕಿಂತ ಅಗ್ಗವಾಗಿದ್ದು, ಪ್ರತಿ ಬಾರಿಯೂ ಮಾರುಕಟ್ಟೆಯಲ್ಲಿ ಇದಕ್ಕೆ ಭಾರೀ ಬೇಡಿಕೆ. ಹೆಣ್ಣು ಕೋಳಿಗಳು ವಾರಕ್ಕೆ ಐದು ಮೊಟ್ಟೆಗಳನ್ನಿಟ್ಟರೆ ಐವತ್ತು ರೂಪಾಯಿ ಸಂಪಾದನೆಯಾಗುತ್ತದೆ ಎನ್ನುವುದು ಇವರ ಅಭಿಪ್ರಾಯ. ಜೊತೆಗೆ, ಇತರ ಜಾನುವಾರು ಗೊಬ್ಬರಕ್ಕೆ ಹೋಲಿಸಿದರೆ ಕೋಳಿ ಗೊಬ್ಬರದಲ್ಲಿ ಹೆಚ್ಚಿನ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದನ್ನು ಸಾವಯವ ಕೃಷಿಯಲ್ಲಿ ಗೊಬ್ಬರವಾಗಿ ಬಳಸಲು ಬಹಳ ಉಪಯುಕ್ತವಾಗಿದೆ. 60 % ತೇವಾಂಶದೊಂದಿಗೆ ಒಂದು ಕೋಳಿ ಪ್ರತಿದಿನ 100 ಗ್ರಾಂ ಹಿಕ್ಕೆಗಳನ್ನು ನೀಡುತ್ತದೆ. ರೈತನಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ದಿಂಬುಗಳು, ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲೂ ಕೋಳಿ ಗರಿಗಳನ್ನು ಬಳಸಲಾಗುತ್ತದೆ.
ಇದರ ನಂತರ ಮೀನು ಸಾಕಣೆ ಮಾಡುವ ಯೋಜನೆ ಇವರ ಮನಸ್ಸಿಗೆ ಬಂದ ಕಾರಣ, ಗ್ರಾಮ ಪಂಚಾಯಿತಿ ವತಿಯಿಂದ ಕೆರೆಯನ್ನು ಗುತ್ತಿಗೆ ಪಡೆದು ರೋಹು, ಗೌರಿ ಮತ್ತು ಕಾಟ್ಲಾ ಮೀನುಗಳನ್ನು ಸಾಕಿ ಲಾಭವನ್ನು ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ಒಂದು ಸಾವಿರದ ಐದುನೂರು ರೂ. ಬಾಡಿಗೆಕಟ್ಟುತ್ತಾರೆ. ಸುಮಾರು 7 ರಿಂದ 8 ಕ್ವಿಂಟಾಲ್ನಷ್ಟು ಮೀನು ಉತ್ಪಾದನೆ ಮಾಡಿ 60 ಸಾವಿರ ಆದಾಯ ಪಡೆಯುತ್ತಿದ್ದಾರೆ.
ನಂತರ ಹೈನುಗಾರಿಕೆಯನ್ನು ಆರಂಭಿಸಿದ ಅಣ್ಣಪ್ಪ, ಹೈನುಗಾರಿಕೆಯ ಬಗ್ಗೆ ಸರಿಯಾದ ಮಾಹಿತಿ ಮತ್ತು ಯೋಜನೆಯೊಂದಿಗೆ ಆರಂಭಿಸಿದರೆ ಇದರಷ್ಟು ಆದಾಯಕರ ಉದ್ಯೋಗ ಬೇರೊಂದಿಲ್ಲ ಎಂದು ಹೇಳುತ್ತಾರೆ. ಪ್ರತಿಯೊಬ್ಬರು ದಿನನಿತ್ಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದರಿಂದ ಇದರ ಆಮದು ಮತ್ತು ಪೂರೈಕೆಯಲ್ಲಿ ಬೇಡಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಹೈನುಗಾರಿಕೆ ಮಾಡುವಾಗ ಮೊದಲು ತಲೆಯಲ್ಲಿ ಇರಬೇಕಾದ ಅಂಶವೆಂದರೆ ಸೂಕ್ತವಾದ ಉತ್ತಮ ತಳಿಯ ರಾಸುವಿನ ಆಯ್ಕೆ. ಉತ್ತಮ ತಳಿಯ ಆರೋಗ್ಯಕರ ಹಸುವನ್ನು ಕೊಳ್ಳುವುದು ಬಹಳ ಮುಖ್ಯ. ರೈತರು ಇದರ ಮೇಲೆ ಹೆಚ್ಚು ಗಮನ ಹರಿಸಬೇಕು, ಆಗ ಮಾತ್ರ ಹೈನುಗಾರಿಕೆ ಲಾಭದಾಯಕವಾಗಿ ಪರಿಣಮಿಸುತ್ತದೆ.
ಹೀಗೆ, ಕುರಿ ಮೇಕೆ ಸಾಕಣೆ, ಕೋಳಿ ಸಾಕಣೆ, ಮೀನು ಸಾಕಣೆ, ಹೈನುಗಾರಿಕೆ ಜೊತೆಗೆ ತರಕಾರಿ ಬೆಳೆ ಹಾಗೂ ಮಾರುಕಟ್ಟೆಯ ವಿಷಯದಲ್ಲೂ ಇವರು ನಿಪುಣರಾಗಿದ್ದು, ವಿಶೇಷವಾಗಿ ತರಕಾರಿ ಬೆಳೆಗಳನ್ನು ಮಾರುಕಟ್ಟೆಗೆ ಅನುಗುಣವಾಗಿ ಬೆಳೆದು ಒಳ್ಳೆಯ ಆದಾಯವನ್ನು ಪಡೆಯುತ್ತಿದ್ದಾರೆ. ಇವರು ತಾವು ಬೆಳೆದ ತರಕಾರಿಗಳನ್ನು ಸಂತೆಯಲ್ಲಿ ಕುಳಿತು ಮಾರುವುದಿಲ್ಲ ಅಥವಾ ಅಂಗಡಿಯವರಿಗೂ ಕೊಡುವುದಿಲ್ಲ. ಬದಲಾಗಿ ಯಾವುದೇ ಮದ್ಯವರ್ತಿಗಳ ಪ್ರವೇಶವಿಲ್ಲದೇ, ತಾವೇ ಮೊಬೈಲ್ ಮೂಲಕ ಆರ್ಡರ್ ಪಡೆದು ತಮ್ಮದೇ ವಾಹನದಲ್ಲಿ ತರಕಾರಿ ತುಂಬಿಕೊಂಡು ಹೋಗಿ ಗ್ರಾಹಕರಿಗೆ ತಲುಪಿಸುತ್ತಾರೆ. ಬೆಳಗ್ಗೆ ಮತ್ತು ಸಂಜೆ ತರಕಾರಿ ಪೂರೈಸುವುದರ ಜೊತೆಗೆ, ಗ್ರಾಹಕರಿಗೆ ಬೇಕಾದ ತರಕಾರಿಗಳನ್ನು ಬೇಡಿಕೆಗೆ ತಕ್ಕಂತೆ ಕರೆ ಬಂದ ಅರ್ಧಗಂಟೆಯಲ್ಲಿ ಗಿಡದಿಂದ ಕಟಾವು ಮಾಡಿ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ ಅಣ್ಣಪ್ಪ ಮಾಡಿಕೊಂಡಿದ್ದಾರೆ.
ವ್ಯವಸಾಯ ಸಂದರ್ಭದಲ್ಲಿ ಸಮಗ್ರ ಬೆಳೆ ಹಾಗೂ ಹೈನುಗಾರಿಕೆ, ಕುರಿ, ಕೋಳಿ ಸಾಕಣೆಯಂತಹ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೂಡ ರೈತರಿಗೆ ಸಾಕಷ್ಟು ಅನುಕೂಲಗಳಿವೆ. ಹಲವು ಬೆಳೆ ಬೆಳೆಯುವುದರಿಂದ, ಒಂದು ಬೆಳೆಯಲ್ಲಿ ನಷ್ಟವಾದರೂ, ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಹಾಗೇ ಒಮ್ಮೊಮ್ಮೆ ಕೃಷಿಯಲ್ಲಿ ಲಾಭ ಕಡಿಮೆ ಸಿಕ್ಕರೂ, ಉಪಕಸುಬುಗಳಿಂದ ನಿರಂತರ ಆದಾಯಕ್ಕೂ ಕಾರಣವಾಗುತ್ತದೆ. ಅದೇ ರೀತಿ, ಕಡಿಮೆ ಭೂಮಿ ಹೊಂದಿರುವ ರೈತರು ಅಂತರ ಬೆಳೆಗಳನ್ನು ಬೆಳೆಯುವ ಜೊತೆಗೆ ಉಪಕಸುಬುಗಳನ್ನು ಅನುಸರಿಸುವ ಮೂಲಕ ಅಣ್ಣಪ್ಪ ಅವರಂತೆ ಸಮಗ್ರ ಕೃಷಿಯಲ್ಲಿ ಯಶಸ್ಸು ಗಳಿಸಬಹುದು.