Government Schemes for Agricultural Development and Farmers : ಕೃಷಿ ಅಭಿವೃದ್ಧಿಗೆ ಮತ್ತು ರೈತರಿಗಾಗಿ ಸರ್ಕಾರದ ಯೋಜನೆಗಳು:
Government Schemes for Agricultural Development and Farmers ಕರ್ನಾಟಕ ಕೃಷಿ ಇಲಾಖೆ ರೈತರಿಗೋಸ್ಕರ ಹಲವಾರು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸುವ ಮೂಲಕ ರೈತರಿಗೆ ಜೀವಾಳವಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ದೊರಕುವ ಯೋಜನೆಗಳು ಹಾಗೂ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ. ಈ ಮಾಹಿತಿಯನ್ನು ಓದುವ ಮೂಲಕ ಅನೇಕ ರೈತರು ಪ್ರಯೋಜನವನ್ನು ಪಡೆದುಕೊಳ್ಳಬಹುದು.
1.ಪಿಎಂ ಕೃಷಿ ಸಿಂಚಾಯಿ ಯೋಜನೆ ಮತ್ತು ಕಿಸಾನ್ ಸಮ್ಮಾನ್ ಯೋಜನೆ:
ರೈತರಿಗೆ ನೀರಿನ ಕೊರತೆಯಾಗದ ರೀತಿ ನೋಡಿಕೊಳ್ಳಲು ಸರ್ಕಾರವು ಈ ಯೋಜನೆಯಲ್ಲಿ, ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿ ಸ್ಪ್ರಿಂಕ್ಲರ್ ವಿಧಾನದ ನೀರಾವರಿಗೆ ತಗುಲುವ ವೆಚ್ಚದ 80 ರಿಂದ 90 ಪ್ರತಿಶತದಷ್ಟು ಸಹಾಯಧನವನ್ನು ಒದಗಿಸುತ್ತದೆ. ಈ ವಿಧಾನದಲ್ಲಿ ಹೊಲವನ್ನು ಸಮತಟ್ಟು ಮಾಡದೇ ನೀರಾವರಿ ಮಾಡಬಹುದು. ಈ ವಿಧಾನ, ಇಳಿಜಾರು ಪ್ರದೇಶಗಳಲ್ಲಿ ಅಥವಾ ಕಡಿಮೆ ಎತ್ತರವುಳ್ಳ ಪ್ರದೇಶಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಈ ಯೋಜನೆಯಡಿಯಲ್ಲಿ, 57 ತಾಲ್ಲೂಕುಗಳ 2.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿ ಚಟುವಟಿಕೆಗಳಿಗಾಗಿ 62 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಈಗಾಗಲೇ 19.14 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಇನ್ನು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 2021-22 ಸಾಲಿನಲ್ಲಿ, ರಾಜ್ಯದ ಸರಿ ಸುಮಾರು 50.35 ಲಕ್ಷ ರೈತರಿಗೆ, 1,0007,13 ಕೋಟಿಗಳಷ್ಟು ಪರಿಹಾರ ನೀಡಲಾಗಿದ್ದು, ಈ ವರ್ಷ 47.83 ಲಕ್ಷ ರೈತರಿಗೆ 956,71 ಕೋಟಿಯಷ್ಟು ಹಣವನ್ನು ಡಿಬಿಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ.
2.ಸೆಕೆಂಡರಿ ಕೃಷಿ ನಿರ್ದೇಶನಾಲಯ:
ರೈತರ ಆದಾಯವನ್ನು ಹೆಚ್ಚಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿದ್ದು, ಈ ಯೋಜನೆಯಲ್ಲಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಹೊಂದಿರುವ ರೈತರಿಗೆ ಆದಾಯ ಹೆಚ್ಚಿಸಲು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ, 2022-23ನೇ ಸಾಲಿನ ಆಯವ್ಯಯದಲ್ಲಿ 500 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದ್ದು ಮೊದಲನೆಯ ಕಂತಿನ ಬಿಡುಗಡೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.
3.ರೈತ ಶಕ್ತಿ ಯೋಜನೆ: ಕೃಷಿ ಯಾಂತ್ರೀಕರಣವನ್ನು ಪ್ರೋತ್ಸಾಹಿಸುವ ಸಲುವಾಗಿ ಡಿಸೇಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಪ್ರತಿ ಎಕರೆಗೆ ಸುಮಾರು 250 ರೂಪಾಯಿ ಗಳಂತೆ ಐದು ಎಕರೆಗೆ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಗೆ ಈಗಾಗಲೇ ಸುಮಾರು ನಾಲ್ಕು ಕೋಟಿ ರೂ. ಅನುದಾನ ನೀಡಲಾಗಿದೆ.
4.ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಷಿ ಮಹಾವಿದ್ಯಾಲಯ: ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ಕೃಷಿ ಮಹಾವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
5.ಪಿಎಂ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ: PMFME ಯೋಜನೆಯಡಿ ರಾಜ್ಯ ಸರ್ಕಾರವು 15% ದಷ್ಟು ಹೆಚ್ಚುವರಿ ಸಹಾಯಧನ, ಎಂದರೆ ಸುಮಾರು 17.46 ಕೋಟಿಯನ್ನು ಕೇಂದ್ರದಿಂದ, ಮತ್ತು 4.21 ಕೋಟಿಯನ್ನು ರಾಜ್ಯದಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಕಿರು ಆಹಾರ ಸಂಸ್ಕರಣ ಕ್ಷೇತ್ರದಲ್ಲಿ ಒಟ್ಟು 93.25 ಕೋಟಿ ರೂ. ಹೂಡಿಕೆ ಮಾಡಲಾಗಿದೆ.
6.ರೈತ ಮಕ್ಕಳಿಗಾಗಿ ಸಿಎಂ “ರೈತ ವಿಧ್ಯಾನಿಧಿ” ಯೋಜನೆ:
ರೈತರ ಮಕ್ಕಳಿಗಾಗಿ ವಿಧ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವಾದ ಮುಖ್ಯಮಂತ್ರಿ ವಿಧ್ಯಾನಿಧಿ ಯೋಜನೆಯಡಿಯಲ್ಲಿ ಈಗಾಗಲೇ 9.48 ಲಕ್ಷ ವಿದ್ಯಾರ್ಥಿಗಳಿಗೆ 397.213 ಕೋಟಿ ರೂಪಾಯಿ ವಿಧ್ಯಾರ್ಥಿ ವೇತನ ವಿತರಣೆ ಮಾಡಲಾಗಿದ್ದು, ಈ ಯೋಜನೆಯಿಂದ ವಂಚಿತರಾದ ವಿದ್ಯಾರ್ಥಿಗಳು ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಬಹುದು. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವ ಅವಶ್ಯಕತೆಯಿಲ್ಲ, ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ ಡಿಬಿಟಿ ಮುಖಾಂತರವೇ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹಾಗೆಯೇ, ರೈತರ ಮಕ್ಕಳು ಓದುತ್ತಿರುವ ಕೋರ್ಸ್ ಗೆ ಅನುಗುಣವಾಗಿ 2000 ರೂ.ನಿಂದ ಹಿಡಿದು 11,000 ರೂಪಾಯಿವರೆಗೂ ವಿಧ್ಯಾರ್ಥಿ ವೇತನ ಸೌಲಭ್ಯವನ್ನು ಪಡೆಯಬಹುದು.
7 . ಕೃಷಿ ಯಾಂತ್ರೀಕರಣ ಯೋಜನೆ: ಕಾರ್ಮಿಕ ಕೊರತೆಯನ್ನು ನೀಗಿಸುವುದು, ಕೃಷಿ ಕೆಲಸಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸುವುದು ಹಾಗೂ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ, ಈ ಯೋಜನೆಯಡಿಯಲ್ಲಿ ರೈತರಿಗೆ 50% ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 90% ದಷ್ಟು ಸಹಾಯಧನ ಗರಿಷ್ಠ ಒಂದು ಲಕ್ಷ ರೂಪಾಯಿಯವರೆಗೂ ನೀಡಲಾಗುತ್ತದೆ. ಉಳುಮೆಯಿಂದ ಹಿಡಿದು ಕೊಯ್ಲಿನವರೆಗೂ ಅಗತ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದ ಮೂಲಕ ರೈತರಿಗೆ ಒದಗಿಸಲಾಗುವುದು.
8. ಕೃಷಿ ಭಾಗ್ಯ ಯೋಜನೆ: ಮಳೆ ನೀರಿನ ಸಮರ್ಥ ಬಳಕೆ ಹಾಗೂ ಸಂರಕ್ಷಿತ ನೀರಾವರಿಯ ಮೂಲಕ ಸುಧಾರಿತ ಬೆಳೆ ಉತ್ಪಾದನಾ ಪದ್ದತಿಯನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಲು ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಪ್ಯಾಕೇಜ್ ರೂಪದಲ್ಲಿ ಕೃಷಿ ಹೊಂಡ, ಪಾಲಿಥಿನ್ ಹೊದಿಕೆ, ಪಂಪ್ ಸೆಟ್, ಲಘು ನೀರಾವರಿ ಘಟಕ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ ಮುಂತಾದ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
9. ಬೀಜ ಪೂರೈಕೆ ಯೋಜನೆ: ಪ್ರಮಾಣಿತ ಮತ್ತು ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ನೀಡುವುದಕ್ಕೋಸ್ಕರವೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಕ್ರಮವಾಗಿ 50% ಹಾಗೂ 75% ನಷ್ಟು ಸಹಾಯಧನ ಒದಗಿಸಲಾಗುವುದು.
10. ಪಿಎಂ ಕಿಸಾನ್ ಮಾನ್ ಧನ ಯೋಜನೆ: ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯಡಿಯಲ್ಲಿ 18-40 ವರ್ಷದೊಳಗಿನ ಸಣ್ಣ ಹಾಗೂ ಅತೀ ಸಣ್ಣ ವ್ಯಾಪ್ತಿಗೆ ಸೇರುವ ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ನಾಗರಿಕ ಸೇವಾ ಕೇಂದ್ರಗಳಲ್ಲಿ ಈ ಯೋಜನೆಗೆ ಹೆಸರು ನೋಂದಾಯಿಸಬಹುದು. ಆಸಕ್ತ ರೈತರು ಪ್ರತೀ ತಿಂಗಳು ಪಿಂಚಣಿ ಪಾವತಿ ಮಾಡುವ ಮೂಲಕ, ವಂತಿಕೆ ಪಾವತಿಸಿ ತಮಗೆ ಅರವತ್ತು ವರ್ಷ ತುಂಬಿದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು.
11 . ಮಣ್ಣಿನ ಸತ್ವ ಹೆಚ್ಚಿಸುವಿಕೆ ಯೋಜನೆ: ಮಣ್ಣಿನಲ್ಲಿರುವ ಲಘುಪೋಷಕಾಂಶಗಳ ಕೊರತೆಯನ್ನು ನೀಗಿಸುವುದಕ್ಕೋಸ್ಕರ ಹಸಿರೆಲೆ ಗೊಬ್ಬರ ಬೀಜಗಳು, ಲಘುಪೋಷಕಾಂಶಗಳು, ಜೈವಿಕ ಗೊಬ್ಬರಗಳು ಹಾಗೂ ಸಾವಯವ ಗೊಬ್ಬರಗಳನ್ನು ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕ್ರಮವಾಗಿ 50% ಹಾಗೂ 75% ಸಹಾಯಧನ ಒದಗಿಸಲಾಗುವುದು. ಎರೆಹುಳು ಗೊಬ್ಬರ ಘಟಕ ಹಾಗೂ ಬಯೋಡೈಗ್ನೋಸ್ಟಿಕ್ ಘಟಕಗಳಿಗೆ ಸಹಾಯಧನ ನೀಡಲಾಗುತ್ತದೆ.
12. ಕೃಷಿ ಯಂತ್ರಧಾರೆ: ರೈತರಿಗೆ ಸಕಾಲದಲ್ಲಿ ಹಾಗೂ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವುದಕ್ಕೋಸ್ಕರ ಎಲ್ಲಾ ಜಿಲ್ಲೆಗಳಲ್ಲಿಯೂ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಗೆ ಭೇಟಿ ನೀಡಿ, ಕಡಿಮೆ ಬಾಡಿಗೆ ದರದಲ್ಲಿ ಬೇರೆ ಬೇರೆ ವಿಧದ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದು.
ಸರ್ಕಾರದ ಇಂತಹ ಎಲ್ಲಾ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಹಾಗೇ, ಇಂತಹ ಹೆಚ್ಚಿನ ಮಾಹಿತಿಗಳನ್ನು ಕನ್ನಡದಲ್ಲಿ ಸರಳವಾಗಿ ತಿಳಿದುಕೊಳ್ಳಲು ನೇಗಿಲಯೋಗಿ ಆಪ್ ನ್ನು ಡೌನ್ಲೋಡ್ ಮಾಡಿಕೊಳ್ಳಿ.
ಇದನ್ನು ಓದಿ.. Karnataka Government Schemes For Agriculture : ರೈತರ ಬೆಳೆ ವಿಮೆ ಪರಿಹಾರ ಹಣ ಜಮೆ: ನಿಮ್ಮ ಅಕೌಂಟ್ ಗೂ ಹಣ ಬಂದಿದೆಯೇ ಎನ್ನುವುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ