ಸಾವಯವ ಕೃಷಿ ಪದ್ದತಿಯ ಪ್ರಯೋಜನಗಳು ! Benefits Of Organic Farming
ಸಹಜ ಕೃಷಿ ಎನ್ನುವುದು, ಕಾರ್ಖಾನೆಗಳಲ್ಲಿ ತಯಾರಾಗುವ ರಾಸಾಯನಿಕ ಗೊಬ್ಬರಗಳು, ಬೆಳವಣಿಗೆ ನಿಯಂತ್ರಕಗಳು ಮತ್ತು ಕೀಟನಾಶಕಗಳನ್ನು ಬಳಸದೆ, ಕೇವಲ ಜೈವಿಕ ಗೊಬ್ಬರಗಳಾದ ಬೂದಿ, ಸಗಣಿ, ಬೇವು, ಕುರಿ ಗೊಬ್ಬರ,ಕೋಳಿ ಗೊಬ್ಬರ,ಎರೆಹುಳು ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆಯುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಈಗಿನ ವಾತಾವರಣಕ್ಕಂತೂ ಇದು ಅತೀ ಅಗತ್ಯ, ಏಕೆಂದರೆ ಇದು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜೊತೆಗೆ ಪರಿಸರವನ್ನು ಕಲುಷಿತ ಮುಕ್ತವನ್ನಾಗಿಸುತ್ತದೆ.
ನಮ್ಮ ದೇಶದಲ್ಲಿ, ನಗರೀಕರಣ ಮತ್ತು ಕೈಗಾರಿಕೀಕರಣದ ನಂತರ, ಜನಸಂಖ್ಯಾ ಸ್ಫೋಟವೂ ಕೂಡ ಪರಿಸರವಾದಿಗಳು ಮತ್ತು ಸರ್ಕಾರದ ಕಳವಳಕ್ಕೆ ಒಂದು ಕಾರಣವಾಗಿ ಪರಿಣಮಿಸಿದೆ. ಏಕೆಂದರೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರದ ಅಗತ್ಯತೆಯನ್ನು ಪೂರೈಸಲು, ಕೃತಕ ವಿಧಾನಗಳ ಮೂಲಕ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಉತ್ಪಾದನೆಯ ಸಮಯವನ್ನು ಕಡಿಮೆ ಮಾಡಲು ಹಾನಿಕಾರಕ ಕೃಷಿ ಪದ್ಧತಿಗಳನ್ನು ಬಳಸುವ ಪ್ರಕ್ರಿಯೆ ಆರಂಭವಾಯಿತು. ಬೆಳೆಗಳ ಉತ್ಪಾದನಾ ಮಟ್ಟ ಹಾಗೂ ದರವನ್ನು ಸುಧಾರಿಸಲು ರಾಸಾಯನಿಕ ಗೊಬ್ಬರಗಳು, ಹಾನಿಕಾರಕ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಕಳೆನಾಶಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಈ ವಿಧಾನ ಒಳಗೊಂಡಿದೆ. ಈ ತಂತ್ರಗಳು ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡುವುದು ಸತ್ಯವಾದರೂ, ಪ್ರಕೃತಿ ರಕ್ಷಣೆಯ ದೂರದೃಷ್ಟಿಯಿಂದ ಹಾಗೂ ಮಾನವರ ಅರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಇದರಿಂದ ಹಾನಿಯೇ ಹೆಚ್ಚು. ಆದ್ದರಿಂದ ಮಾನವ ನಾಗರಿಕತೆಗೆ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಉಂಟಾಗಬಹುದಾದ ದುರಂತವನ್ನು ತಡೆಗಟ್ಟಲು ಸಹಜ ಕೃಷಿಯೇ ಅಂತಿಮ ಪರಿಹಾರವಾಗಿದೆ.
ಸಾವಯವ ಕೃಷಿಯು ಸಹಜ ಕೃಷಿಯ ಒಂದು ತಂತ್ರವಾಗಿದ್ದು, ಇದರಲ್ಲಿ ಗಾಳಿ, ನೀರು ಮತ್ತು ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸುಸ್ಥಿರ ವಿಧಾನದ ಮೂಲಕ ಜಮೀನಿನಲ್ಲಿ ಕೃಷಿ ಪ್ರಕ್ರಿಯೆ ನಡೆಯುತ್ತದೆ. ಸಾವಯವ ಕೃಷಿ ಎಂದರೆ ಮಾನವ ನಿರ್ಮಿತ ರಾಸಾಯನಿಕಗಳನ್ನು ಬಳಸುವುದೇ ಇಲ್ಲ ಎಂದರ್ಥವಲ್ಲ. ಅನೇಕ ಸಾವಯವ ಕೃಷಿ ವಿಧಾನಗಳಲ್ಲಿ, ಮಾನವ ನಿರ್ಮಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬೆಳೆ ಉತ್ಪಾದನೆಯನ್ನು ಸುಧಾರಿಸಲು ಬಳಸದಿದ್ದರೂ ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬಳಸಲಾಗುತ್ತದೆ. ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಈ ರಾಸಾಯನಿಕಗಳು ನೇರವಾಗಿ ಮಣ್ಣಿಗೆ ಹೋಗುತ್ತಿವೆಯೇ ಹೊರತು ನಾವು ಸೇವಿಸುವ ಆಹಾರಕ್ಕಲ್ಲ. ಸಾವಯವ ಮತ್ತು ಅಜೈವಿಕ ಕೃಷಿಯ ನಡುವಿನ ವ್ಯತ್ಯಾಸವೆಂದರೆ ಸಾವಯವ ಕೃಷಿಯಲ್ಲಿ ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆಯೇ ಹೊರತು ಬೆಳೆಗಳನ್ನು ಭೇದಿಸುವುದಿಲ್ಲ. ಆದರೆ ಅಜೈವಿಕ ಕೃಷಿಯಲ್ಲಿ, ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಹಾಳುಮಾಡುವುದರ ಜೊತೆಗೆ ಕೃಷಿ ಉತ್ಪನ್ನದ ನಂತರ ಮಣ್ಣನ್ನು ಬಂಜರುಗೊಳಿಸುತ್ತವೆ. ರಾಸಾಯನಿಕಗಳು ಆಹಾರದೊಳಗೆ ಸೇರಿಕೊಳ್ಳುವ ಮೂಲಕ ಅಂತಿಮವಾಗಿ ನಮ್ಮ ಆಹಾರ ಸರಪಳಿಗಳಿಯನ್ನೇ ಭೇದಿಸುತ್ತವೆ ಎನ್ನುವುದು ಆತಂಕದ ವಿಷಯವೇ ಸರಿ.
ಆದರೆ, ಸಾವಯವ ಕೃಷಿಯು ಪ್ರಕೃತಿಯ ನೀತಿನಿಯಮಗಳನ್ನು ಗೌರವಿಸುವ ಜೊತೆಗೆ ಭೂಮಿಯನ್ನು ಪೋಷಿಸುವ ಸಾಮರ್ಥ್ಯವನ್ನೂ ಹೊಂದಿದೆ. ಈ ಪದ್ದತಿಯು ವ್ಯಾಪಕವಾದ ಆಧುನಿಕ ಕೃಷಿ ವಿಧಾನಗಳು ಮತ್ತು ಪರಂಪರೆಯಿಂದ ಅನುಸರಿಸಿಕೊಂಡ ಬಂದ ಬೆಳೆಗಳ ಸಮತೋಲನವನ್ನು ಬದಲಿಸುವ ಪ್ರಕ್ರಿಯೆಗಳಲ್ಲಿ ಮಾನವ ಹಸ್ತಕ್ಷೇಪದಿಂದ ಮುಕ್ತವಾಗಿದೆ.
1 ಸಾವಯವ ಕೃಷಿಯ (Organic Farming) ಕೆಲವು ಪ್ರಮುಖ ಪ್ರಯೋಜನಗಳನ್ನು ಹೇಳುವುದಾದರೆ:
- ಅಜೈವಿಕ ಕೃಷಿಗೆ ಹೋಲಿಸಿದರೆ ಆರೋಗ್ಯಕರ ಮತ್ತು ಗುಣಮಟ್ಟದ ಕೃಷಿ ಉತ್ಪಾದನೆಯು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ. ಮುಖ್ಯವಾದ ವಿಷಯವೆಂದರೆ, ಸಾವಯವ ಕೃಷಿಯು ಪರಿಸರ ಸ್ನೇಹಿಯಾಗಿದೆ. ಏಕೆಂದರೆ ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಕೃಷಿ ಉದ್ದೇಶಗಳಿಗಾಗಿ ಅದೇ ಭೂಮಿಯನ್ನು ಪುನರಾವರ್ತನೆ ಮಾಡಲು ಸಹಕರಿಸುತ್ತದೆ.
- ಸಾವಯವ ಕೃಷಿ ಪದ್ಧತಿ ಅರಣ್ಯನಾಶವನ್ನು ಕಡಿಮೆ ಮಾಡುವಲ್ಲಿ ಬಹಳ ಉಪಯುಕ್ತವಾಗಿದೆ.
- ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ. ಈ ವ್ಯವಸಾಯ ಪದ್ದತಿಯ ಮೂಲಕ ರೈತರು ಹೆಚ್ಚಿನ ಪ್ರಮಾಣದ ಲಾಭವನ್ನು ಗಳಿಸಬಹುದು
- ಅದೇ ರೀತಿ, ನಿರಂತರವಾಗಿ ಸಾವಯವ ಕೃಷಿ ವಿಧಾನವನ್ನು ಅನುಸರಿಸುವುದರಿಂದ ರೈತರಿಗೆ ಇಳುವರಿಯಲ್ಲಿ ನಿರಂತರತೆ ಮತ್ತು ನ್ಯಾಯಯುತ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಸಹಾಯವಾಗುತ್ತದೆ.
- ಸಾವಯವ ಕೃಷಿಯ ಮತ್ತೊಂದು ಮುಖ್ಯವಾದ ಪ್ರಯೋಜನವೆಂದರೆ, ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಸಹಾಯ ಮಾಡುವುದು.
- ಬೆಳೆಗಳಿಗೆ ವಿಷಕಾರಿ ಕೀಟನಾಶಕಗಳನ್ನು ಹಾಕುವುದರಿಂದ, ಜೇನುನೊಣಗಳಂತಹ ಪರಾಗಸ್ಪರ್ಶ ಮಾಡುವ ಕೀಟಗಳು ನಾಶವಾಗುವ ಮೂಲಕ ಮನುಷ್ಯನೇ ಹೂವುಗಳನ್ನು ಕೃತಕವಾಗಿ ಪರಾಗಸ್ಪರ್ಶ ಮಾಡಬೇಕಾಗುತ್ತದೆ. ಇದೂ ಕೂಡ ಸಾವಯವ ಕೃಷಿಯನ್ನು ಉತ್ತೇಜಿಸಲು ಒಂದು ಕಾರಣವಾಗಿದೆ.
- ಈಗಾಗಲೇ ಹೇಳಿದಂತೆ, ಸಾವಯವ ಕೃಷಿಯಲ್ಲಿ ಮಣ್ಣಿನ ಪೌಷ್ಠಿಕಾಂಶವನ್ನು ಉಳಿಸಿಕೊಳ್ಳಲು ಬೆಳೆ ಬದಲಾವಣೆಯಂತಹ ನೈಸರ್ಗಿಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇದರಿಂದ ಭೂಮಿಯಲ್ಲಿ ಖಾಲಿಯಾದ ಪೋಷಕಾಂಶಗಳು ಮತ್ತೆ ಉತ್ಪತ್ತಿಯಾಗುತ್ತವೆ. ಇಲ್ಲಿ ಬೆಳೆಗಳು ಸ್ವಾವಲಂಬಿ ಪರಿಸರದಲ್ಲಿ ಬೆಳೆಯುವುದರಿಂದ, ಉತ್ತಮ ಪೌಷ್ಠಿಕಾಂಶದೊಂದಿಗೆ ನೈಜ ರೂಪದಲ್ಲಿ ದೊರೆಯುತ್ತದೆ. ಹಾಗಾಗಿ ನಮಗೆ ಆ ಕೃಷಿ ಉತ್ಪನ್ನದ ನೈಸರ್ಗಿಕ ಸಾರವನ್ನು ಪಡೆಯಲು ಸಾಧ್ಯವಾಗುತ್ತದೆ.
- ಆಂಟಿಆಕ್ಸಿಡೆಂಟ್ಗಳು, ಫೀನಾಲಿಕ್ಸ್ ಮತ್ತು ಫ್ಲೇವನಾಯ್ಡ್ಗಳಂತಹ ಕೆಲವು ಪ್ರಮುಖ ಅಂಶಗಳನ್ನು ಹೊಂದಿರುವುದರಲ್ಲಿ ಸಾವಯವ ಆಹಾರ ಮುಂದಿದೆ.
- ನಮ್ಮ ದೇಹದಲ್ಲಿ, ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಕೀಟನಾಶಕಗಳ ಪ್ರಮಾಣ ಕಡಿಮೆಯಾಗಬೇಕೆನ್ನುವುದು ನಿಮ್ಮ ಇಚ್ಛೆಯಾಗಿದ್ದಲ್ಲಿ, ಸಾವಯವ ಉತ್ಪನ್ನಗಳು ಉತ್ತಮ ಪರ್ಯಾಯವಾಗಿವೆ. ಸಾವಯವ ಆಹಾರಗಳು ಪರಿಸರ ವಿಜ್ಞಾನ ಮತ್ತು ಜೀವವೈವಿಧ್ಯತೆಯ ಬಗ್ಗೆ ಕಾಳಜಿ ವಹಿಸುವವರಿಗೆ ವರದಾನವೇ ಸರಿ.
2 ಸಂಕ್ಷಿಪ್ತವಾಗಿ ಸಾವಯವ ಕೃಷಿಯ (Organic Farming) ಪ್ರಯೋಜನಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು:
- ಮುಂದಿನ ಪೀಳಿಗೆಗಾಗಿ ಮಣ್ಣನ್ನು ರಕ್ಷಿಸುವುದು.
- ಮಣ್ಣಿನ ನಷ್ಟವನ್ನು ತಡೆಯಲು.
- ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು.
- ರೈತರ ಆದಾಯ ಮಟ್ಟವನ್ನು ಹೆಚ್ಚಿಸಲು.
- ಆರ್ಥಿಕ ಉತ್ಪಾದನೆಯನ್ನು ಗುರಿಯಾಗಿಸಲು.
- ಗ್ರಾಹಕರಿಗೆ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಆಹಾರ ಪದಾರ್ಥವನ್ನು ಒದಗಿಸುವುದು.
- ಮಾನವರು ಪ್ರಾಣಿ ಮತ್ತು ಸಸ್ಯಗಳ ಆರೋಗ್ಯವನ್ನು ರಕ್ಷಿಸಲು.
- ಜೀವವೈವಿಧ್ಯತೆ ಮತ್ತು ಅನುವಂಶಿಕ ಸಂಪನ್ಮೂಲಗಳ ಸಂರಕ್ಷಣೆ ಮಾಡಲು.
- ನೈಸರ್ಗಿಕ ಆವಾಸಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳ ರಕ್ಷಣೆ ಮಾಡಲು.
- ನೈಸರ್ಗಿಕವಾಗಿ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ರಚನೆಯನ್ನು ಸುಧಾರಿಸಲು ಮತ್ತು ರಕ್ಷಿಸಲು.
- ಪರಿಸರ ಮತ್ತು ಮಣ್ಣಿನ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತಹ ಹೊಸ ಹೊಸ ಕೃಷಿ ತಂತ್ರಗಳನ್ನು ಅಭಿವೃದ್ಧಿಪಡಿಸುವುದು.
- ಕೃಷಿ ಉತ್ಪಾದನೆಯಲ್ಲಿ ಉದ್ಯೋಗವನ್ನು ಸುಧಾರಿಸುವ ಮೂಲಕ ಕಾರ್ಮಿಕ ಬಲವನ್ನು ಸಮರ್ಥವಾಗಿ ಬಳಸುವುದು.
- ಉತ್ಪಾದಕ ಸಂಸ್ಥೆ ಮತ್ತು ಗುತ್ತಿಗೆ ಕೃಷಿ ಪದ್ಧತಿಗಳನ್ನು ಹೆಚ್ಚು ಉತ್ತೇಜಿಸುವುದು.
ಹಾಗಾಗಿಯೇ, ಸಾವಯವ ಆಹಾರವನ್ನು ಆರಿಸುವುದು ಪರಿಸರ ಸಂರಕ್ಷಣೆಯ ಮೊದಲ ಹೆಜ್ಜೆ ಎಂದರೂ ತಪ್ಪಿಲ್ಲ.