ಕೃಷಿ ವಿಧಾನಗಳು: Farming methods
Farming Methods : ಮಾನವ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲ ಸೆಲೆ ಕೃಷಿಯೇ ಆಗಿದೆ. ಗೆಡ್ಡೆಗೆಣಸು ಸಂಗ್ರಹಿಸುವ ಮತ್ತು ಬೇಟೆಯಾಡುತ್ತಿದ್ದ ಮಾನವ ಕ್ರಮೇಣ ಕೃಷಿಗಾಗಿ ಒಂದೆಡೆ ನೆಲೆಯೂರಿದಾಗ ನಾಗರಿಕತೆ ಪ್ರಾರಂಭವಾಯಿತು. ಈ ರೀತಿ ಕೃಷಿಗಾಗಿ ಒಂದೆಡೆ ನೆಲೆಯೂರಿದ್ದರಿಂದಲೇ ಆರ್ಥಿಕತೆ ಮತ್ತು ಸಂಸ್ಕೃತಿಯೂ ಅಭಿವೃದ್ಧಿಯಾಯಿತು. ವ್ಯವಸಾಯ ಎನ್ನುವುದು ಭಾರತದ ರೈತನಿಗೆ ಜೀವನೋಪಾಯದ ಒಂದು ವಿಧಾನವಷ್ಟೇ ಆಗಿರದೆ, ಅವನ ದಿನನಿತ್ಯದ ಹಾಗೂ ಸಾಂಸ್ಕೃತಿಕ ಜೀವನ ವಿಧಾನವೇ ಆಗಿತ್ತು. ಭಾರತಿಯ ಕೃಷಿಯಲ್ಲಿ ಕೆಲವು ದಶಕಗಳ ಹಿಂದಿನವರೆಗೂ ಮಹತ್ತರ ಬದಲಾವಣೆಗಳೇನೂ ಇರಲಿಲ್ಲ. ಪೂರ್ವಜರಿಂದ ಪಾರಂಪರಿಕವಾಗಿ ಪಡೆದ ಜ್ಞಾನ ಮತ್ತು ಅನುಭವದಿಂದ ರೈತಾಪಿ ಬದುಕನ್ನು ನಡೆಸಿಕೊಂಡು ಹೋಗಲಾಗುತ್ತಿತ್ತು. ರೈತನ ಕೃಷಿಯ ಹಾಗೂ ಕೌಟುಂಬಿಕ ಅವಶ್ಯಕತೆಗಳು ಕೆಲವು ಮೂಲಭೂತ ವಿಷಯಕ್ಕಷ್ಟೇ ಸೀಮಿತವಾಗಿದ್ದವು. ಸಾಮಾನ್ಯವಾಗಿ ಈ ಅವಶ್ಯಕತೆಗಳನ್ನು ಸ್ಥಳೀಯವಾಗಿಯೇ ನೀಗಿಸಿಕೊಳ್ಳಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ಈ ಸೇವೆಗಳಿಗೆ ಸಂದಾಯವನ್ನು ಕೃಷಿ ಉತ್ಪನ್ನಗಳ ರೂಪದಲ್ಲಿಯೇ ಕೊಯ್ಲಿನ ಸಮಯದಲ್ಲಿ ಪಾವತಿಸಲಾಗುತ್ತಿತ್ತು. ಆದರೆ ಈಗ ಆಧುನಿಕ ಕೃಷಿ ವಿಧಾನಗಳಿಂದ ಹಾಗೂ ಜಾಗತೀಕರಣಗಳಿಂದಾಗಿ, ಯಾವುದೇ ಹಳ್ಳಿಯ ರೈತನೂ ತನ್ನಷ್ಟಕ್ಕೆ ತಾನು ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಕೃಷಿ ವಿಧಾನಗಳ ಅಭಿವೃದ್ಧಿ, ವ್ಯವಸಾಯ ಕ್ಷೇತ್ರದಲ್ಲಾಗುತ್ತಿರುವ ಮಹತ್ವದ ಘಟನೆಗಳು, ಕೃಷಿಯ ರೂಪುರೇಷೆಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಪ್ರತಿಯೊಬ್ಬ ರೈತನೂ ತಿಳಿದಿರಲೇಬೇಕಾಗುತ್ತದೆ. ಇಂತಹ ಎಲ್ಲಾ ಮಾಹಿತಿಗಳನ್ನು ಸುಲಭವಾಗಿ ಅರ್ಥವಾಗುವಂತೆ ತಿಳಿಯಬೇಕಾದರೆ ನಮ್ಮ “ನೇಗಿಲ ಯೋಗಿ” ಅಪ್ಲಿಕೇಶನ್ ನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ. ನಮ್ಮ ಅಪ್ಲಿಕೇಶನ್ ನಲ್ಲಿ ಕೃಷಿ ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನೂ ಅತ್ಯಂತ ಸರಳವಾಗಿ ತಿಳಿಸಲಾಗುತ್ತದೆ.
ಗಿಡಗಳನ್ನು ಬೆಳೆಸಲು ಅವುಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ ಮತ್ತು ರೋಗ ಹಾಗೂ ಕೀಟಗಳಿಂದ ರಕ್ಷಿಸಲು ಔಷಧಿಗಳನ್ನು ಸಿಂಪಡಿಸಬೇಕಾಗುತ್ತದೆ. ಗಿಡಗಳಿಗೆ ನಾವು ಯಾವ ರೀತಿಯ ಗೊಬ್ಬರ ಮತ್ತು ಔಷಧಿಗಳನ್ನು ಬಳಸುತ್ತೇವೆಯೋ, ಅದರ ಆಧಾರದ ಮೇಲೆ ಕೃಷಿಯು ರಾಸಾಯನಿಕವೇ ಸಾವಯವವೇ ಅಥವಾ ನೈಸರ್ಗಿಕವೇ ಎಂಬುದು ನಿರ್ಧರಿತವಾಗುತ್ತದೆ. ಮೊದಲಿಗೆ ನಾವು ನೈಸರ್ಗಿಕ ಕೃಷಿ, ಸಾವಯವ ಕೃಷಿ ಹಾಗೂ ರಾಸಾಯನಿಕ ಕೃಷಿಯ ಅರ್ಥ ಏನೆಂದು ತಿಳಿದುಕೊಳ್ಳೋಣ.
ನೈಸರ್ಗಿಕ ಕೃಷಿ: Natural Farming
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನೈಸರ್ಗಿಕ ಕೃಷಿಯನ್ನೇ ಮಾಡಲಾಗುತ್ತಿತ್ತು. ಈ ಪದ್ಧತಿಯಲ್ಲಿ ನೈಸರ್ಗಿಕ ಪದಾರ್ಥಗಳ ಮೇಲೆ ಅತ್ಯಲ್ಪ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಆಪತ್ಕಾಲದಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳು ದೊರಕುವುದು ಕಠಿಣವಾಗಿದೆ. ಹಾಗಾಗಿ ನೈಸರ್ಗಿಕ ಕೃಷಿಯು ಸಂಪೂರ್ಣ ಸ್ವಾವಲಂಬಿ ಕೃಷಿಯಾಗಿದ್ದು ಆಪತ್ಕಾಲಕ್ಕಾಗಿ, ಹಾಗೆಯೇ ಇತರ ಸಮಯದಲ್ಲಿಯೂ ಅತ್ಯಂತ ಉಪಯುಕ್ತವಾಗಿದೆ. ನೈಸರ್ಗಿಕ ಪದ್ಧತಿಯಿಂದ ಬೆಳೆಸಿದ ತರಕಾರಿ, ಹಣ್ಣುಗಳು, ಹಾಗೆಯೇ ಔಷಧಿ ವನಸ್ಪತಿಗಳು ಸಂಪೂರ್ಣ ವಿಷರಹಿತ ಮತ್ತು ಆರೋಗ್ಯಕರವಾಗಿರುತ್ತವೆ. ಪದ್ಮಶ್ರೀ ಪುರಸ್ಕೃತ ಶ್ರೀ. ಸುಭಾಷ ಪಾಳೇಕರ ಇವರು ‘ಸುಭಾಷ ಪಾಳೇಕರ ನೈಸರ್ಗಿಕ ಕೃಷಿ’ ಈ ಕೃಷಿತಂತ್ರವನ್ನು ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಿದರು. ಇದರಲ್ಲಿ ದೇಸೀ ಹಸುವಿನ ಸೆಗಣಿ ಮತ್ತು ಗೊಮೂತ್ರ, ಹಾಗೆಯೇ ಸಹಜವಾಗಿ ದೊರಕುವ ನೈಸರ್ಗಿಕ ವಸ್ತುಗಳನ್ನು ಉಪಯೋಗಿಸಿ ಜೀವಾಮೃತ, ಬೀಜಾಮೃತಗಳಂತಹ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.
ನೈಸರ್ಗಿಕ ಕೃಷಿಯನ್ನು ಸಹಜ ಕೃಷಿ ಅಥವಾ ಶೂನ್ಯ ಬಂಡವಾಳ ಕೃಷಿ ಎಂದೂ ಕೂಡ ಕರೆಯುತ್ತಾರೆ. ಹೆಚ್ಚು ದುಡ್ಡು ಖರ್ಚು ಮಾಡದೆ ಬೆಳೆ ಬೆಳೆಯುವ ತಂತ್ರವೇ ಈ ನೈಸರ್ಗಿಕ ಕೃಷಿ ವಿಧಾನ. ಬಿತ್ತನೆ ಬೀಜ, ಕೀಟನಾಶಕ, ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರಕ್ಕಾಗಿ ಸರದಿಯಲ್ಲಿ ಕಾದು ನಿಂತು ಹಣ ಹಾಗೂ ಸಮಯ ಖರ್ಚು ಮಾಡಿ ಬೆಳೆ ಬೆಳೆಯುವುದರ ಬದಲು, ಕೊಟ್ಟಿಗೆಯಲ್ಲಿನ ಆಕಳಿನ ಸಗಣಿ, ಗಂಜಲ, ಬದುವಿನ ಮಣ್ಣು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ. ಇಲ್ಲಿ ರಸಗೊಬ್ಬರ, ಕೀಟನಾಶಕಗಳ ಅಗತ್ಯವಿಲ್ಲ, ಕೊಟ್ಟಿಗೆಯಲ್ಲಿ ಒಂದು ದೇಸಿ ಆಕಳು ಇದ್ದರೆ ಸಾಕು, ಹೆಚ್ಚಿನ ಖರ್ಚಿಲ್ಲದೆ ನೈಸರ್ಗಿಕ ಕೃಷಿ ಮಾಡಬಹುದು. ಈ ವಿಧಾನದಿಂದ ನೈಸರ್ಗಿಕವಾಗಿ ಬೆಳೆಗಳನ್ನು ಬೆಳೆಯುವುದಲ್ಲದೆ ಮಣ್ಣಿನ ಸಂರಕ್ಷಣೆ ಸಹ ಮಾಡಬಹುದು. ಅದಲ್ಲದೆ ಈ ಕೃಷಿಯು ಅತೀ ಕಡಿಮೆ ಬಂಡವಾಳವನ್ನು ಒಳಗೊಂಡಿರುವುದರಿಂದ ನಷ್ಟದ ಮಾತೇ ಇಲ್ಲ!
ಸಾವಯವ ಕೃಷಿ : Organic Farming
ನಿರುಪಯುಕ್ತ ನೈಸರ್ಗಿಕ ಪದಾರ್ಥಗಳ ಮೇಲೆ ಅನೇಕ ಪ್ರಕ್ರಿಯೆಗಳನ್ನು ಮಾಡಿ ಸಾವಯವ ಗೊಬ್ಬರಗಳನ್ನು ತಯಾರಿಸಲಾಗುತ್ತದೆ. ಕಂಪೋಸ್ಟ್ ಗೊಬ್ಬರ, ಎರೆಹುಳ ಗೊಬ್ಬರ, ಮಾರುಕಟ್ಟೆಯಲ್ಲಿನ ತರಕಾರಿಗಳ ಕಸ, ನಗರಗಳಲ್ಲಿನ ಕಸ, ನಿರುಪಯುಕ್ತ ಪದಾರ್ಥಗಳು, ಪ್ರಾಣಿಗಳ ಎಲುಬಿನ ಚೂರುಗಳು, ಮೀನಿನ ಗೊಬ್ಬರ, ಕೋಳಿಯ ಗೊಬ್ಬರ, ಪೇಟೆಯಲ್ಲಿ ಸಿಗುವ ಸಾವಯವ ಗೊಬ್ಬರಗಳು ಸಾವಯವ ಕೃಷಿಗಾಗಿ ಉಪಯೋಗಿಸಲಾಗುವ ಗೊಬ್ಬರಗಳ ಉದಾಹರಣೆಗಳಾಗಿವೆ. ಪೇಟೆಯಲ್ಲಿ ದೊರಕುವ ಎಲ್ಲಕ್ಕಿಂತ ಪ್ರಚಲಿತ ಸಾವಯವ ಗೊಬ್ಬರವೆಂದರೆ ‘ಸ್ಟೆರಾಮೀಲ್’. ಇದರಲ್ಲಿ ಎಲುಬುಗಳ ಪುಡಿಯೂ ಇರುತ್ತದೆ. ಹಾಗೆಯೇ, ‘ಕಂಪೋಸ್ಟ್ ಗೊಬ್ಬರ’ ಎಂದರೆ ಬೇರೆಬೇರೆ ಕಸವನ್ನು ಒಂದರಮೇಲೊಂದು ಹಾಕಿ ಅದನ್ನು ಕೊಳೆಸಿ ತಯಾರಿಸಿದ ಪದಾರ್ಥ ಎಂದು ಹೇಳಬಹುದು.
ಸಾವಯವ ಕೃಷಿಗಳಲ್ಲಿ ಈ ರೀತಿ ಹೆಚ್ಚು ಪ್ರಕ್ರಿಯೆಯನ್ನು ಮಾಡಿದ ಗೊಬ್ಬರಗಳನ್ನು ಬಳಸುವುದರಿಂದ ಆ ಗೊಬ್ಬರಗಳು ತುಂಬಾ ದುಬಾರಿ ಆಗಿರುತ್ತವೆ, ಹಾಗೆಯೇ ಅವುಗಳಲ್ಲಿ ಆರ್ಸೆನಿಕ್, ಸೀಸಗಳಂತಹ ವಿಷಕಾರಿ ಧಾತುಗಳ ಪ್ರಮಾಣವೂ ಹೆಚ್ಚಿರುತ್ತದೆ. ಈ ಧಾತುಗಳಿಂದ ಶರೀರದ ಮೇಲೆ ದುಷ್ಪರಿಣಾಮವಾಗಬಹುದು. ಈ ಪದ್ಧತಿಯೂ ಪರಾವಲಂಬಿಯಾಗಿರುವುದರಿಂದ ಆಪತ್ಕಾಲಕ್ಕಾಗಿ ಉಪಯುಕ್ತವಾಗಿಲ್ಲ.
ರಾಸಾಯನಿಕ ಕೃಷಿಯ ಭೀಕರ ದುಷ್ಪರಿಣಾಮಗಳು ಗಮನಕ್ಕೆ ಬಂದ ನಂತರ ವಿದೇಶಗಳಲ್ಲಿ ಸಾವಯವ ಕೃಷಿ ಪ್ರಾರಂಭವಾಯಿತು. ಅನಂತರ ಈ ಪದ್ಧತಿಯು ಭಾರತದಲ್ಲಿ ಬಂದಿತು. ಇದು ಮೂಲ ಭಾರತೀಯ ಪದ್ಧತಿಯಲ್ಲ!
ರಾಸಾಯನಿಕ ಕೃಷಿ: Chemical farming
ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು, ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಲು ಪ್ರಾರಂಭಿಸಲಾಯಿತು ಮತ್ತು ನಂತರ ಭಾರತದಲ್ಲಿ ಕೂಡ ಅದನ್ನು ಜಾರಿಗೆ ತರಲಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು ತಯಾರಿಸಿದ ವಿಷಕಾರಿ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಬಳಸಲಾಗುತ್ತದೆ. ಇವುಗಳನ್ನು ಉಪಯೋಗಿಸುವುದರಿಂದ ವಾತಾವರಣದ ಮೇಲೆ, ಹಾಗೆಯೇ ನಮ್ಮ ಆರೋಗ್ಯದ ಮೇಲೆಯೂ ಅನೇಕ ಭೀಕರ ದುಷ್ಪರಿಣಾಮಗಳಾಗುತ್ತವೆ. ವಿಷಕಾರಿ ರಾಸಾಯನಿಕ ಗೊಬ್ಬರಗಳನ್ನು ಮತ್ತು ಔಷಧಗಳನ್ನು ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ತಯಾರಿಸುತ್ತಾರೆ. ಆದುದರಿಂದ ಆಪತ್ಕಾಲದಲ್ಲಿ ಅವು ಸಿಗಲಾರವು, ಹಾಗೆಯೇ ಆರೋಗ್ಯದ ದೃಷ್ಟಿಯಿಂದ ಕೂಡ ಈ ಪದ್ಧತಿಯು ಒಳ್ಳೆಯದಲ್ಲ.
ಸಾವಯವ ಕೃಷಿ ಹಾಗೂ ಸಹಜ ಕೃಷಿಯ ನಡುವಿನ ವ್ಯತ್ಯಾಸಗಳು : Differences between Organic Farming and Conventional Farming:
ಹೆಚ್ಚಿನವರು ಸಹಜ ಕೃಷಿ ಹಾಗೂ ಸಾವಯವ ಕೃಷಿ ಎರಡೂ ಒಂದೇ ಎಂದು ತಿಳಿದುಕೊಂಡಿರುತ್ತಾರೆ. ಎರಡೂ ವಿಧಾನಗಳೂ ಹಾನಿಕಾರಿಕ ರಾಸಾಯನಿಕ ಮುಕ್ತವಾಗಿರುತ್ತವೆ ಎಂಬುದು ನಿಜ, ಆದರೆ ಈ ಎರಡು ಕೃಷಿ ಪದ್ಧತಿಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳ ಬಗ್ಗೆ ತಿಳಿಯಲು ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ.
ಸಹಜ ಕೃಷಿಯಲ್ಲಿ ಇಳುವರಿ ಹೆಚ್ಚಿಸುವುದು ಹೇಗೆ ! How To Increase Yield In Organic Farming
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ