How to increase yield in organic farming? ಸಾವಯವ ಕೃಷಿಯಲ್ಲಿ ಇಳುವರಿ ಹೆಚ್ಚಿಸುವುದು ಹೇಗೆ.?
ಮನುಷ್ಯ ಸಂಕುಲ ಇಂದು ಅನುಭವಿಸುತ್ತಿರುವ ಸಕಲ ಆರೋಗ್ಯದ ಸಮಸ್ಯೆಗಳಿಗೆ, ಉಳಿದ ಒಂದೇ ಪರಿಹಾರವಾಗಿ ಸಾವಯವ ಕೃಷಿ ನಿಂತಿದೆ. ಹಾಗಂತಾ ಸಾವಯವ ಕೃಷಿ ಪದ್ಧತಿ ಇತ್ತೀಚಿಗೆ ಹುಟ್ಟಿದ್ದಲ್ಲ. ಇದಕ್ಕೆ ಸಹಸ್ರ ಕೋಟಿ ವರ್ಷಗಳ ಇತಿಹಾಸವಿದೆ. ಮನುಷ್ಯನ ಹುಟ್ಟಿನೊಂದಿಗೆ ಆರಂಭವಾಗಿ, ಆತ ಅಭಿವೃದ್ಧಿಯಾದಂತೆಲ್ಲಾ ಬೆಳೆದು ಬಂದಿರುವ ಈ ಕೃಷಿ ಪದ್ಧತಿ, ಇಂದಿನ ಆರೋಗ್ಯ, ಹಾಗೂ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎನ್ನುತ್ತಾರೆ ನುರಿತ ಕೃಷಿ ತಜ್ಞರು. ವಿಜ್ಞಾನಿಗಳೂ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಂತೂ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾದಂತೆಲ್ಲಾ, ಆರೋಗ್ಯಯುತ ಆಹಾರದ ಹುಡುಕಾಟದಲ್ಲಿ ತೊಡಗಿದ್ದಾರೆ. ರಾಸಾಯನಿಕ ಮಿಶ್ರಿತ ವಿಷಕಾರಿ ಆಹಾರವನ್ನು ಸೇವಿಸಿ, ಆಸ್ಪತ್ರೆಗಳಿಗೆ ಹಣ ಸುರಿದು ಸಾಕಾಗಿರುವ ನಾವು, ಈಗ ರಾಸಾಯನಿಕಗಳ ಸಂಪರ್ಕದಿಂದಲೇ ದೂರ ಉಳಿದಿರುವ ಸಾವಯವ ಉತ್ಪನ್ನಗಳ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ. ರೈತರೂ ಅಷ್ಟೇ, ತಮಗೆ ಅನ್ನ ನೀಡುವ ಭೂಮಿಯನ್ನು ಹಾಳು ಮಾಡುವ ರಾಸಾಯನಿಕ ಕೃಷಿಯನ್ನು ಬಿಟ್ಟು ‘ಸಾವಯವ ಕೃಷಿ’ ಎನ್ನುವ ಮಂತ್ರ ಜಪಿಸುತ್ತಿದ್ದಾರೆ.
ಹಾಗಾದರೆ, ಸಾವಯವ ಕೃಷಿಯ ಬಗ್ಗೆ ತಿಳಿದುಕೊಳ್ಳೋಣ. ಸಾವಯವ ಕೃಷಿ ಎಂದರೆ ಮಣ್ಣಿಗೆ ಯಾವುದೇ ರಾಸಾಯನಿಕ ಗೊಬ್ಬರ ಬೆರೆಸದೆ, ಪ್ರಕೃತಿಯಲ್ಲಿ ಸಿಗುವ ತ್ಯಾಜ್ಯ ಹಾಗೂ ಇತರ ವಸ್ತುಗಳನ್ನೇ ಬಳಸಿಕೊಂಡು ಮಾಡುವ ವ್ಯವಸಾಯ ಎಂದು ಹೇಳಬಹುದು. ಇದರಿಂದ ಮಣ್ಣಿನ ಗುಣಮಟ್ಟಕ್ಕೂ ಧಕ್ಕೆಯಾಗುವುದಿಲ್ಲ. ಪರಿಸರವೂ ಸುರಕ್ಷಿತವಾಗಿರುತ್ತದೆ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಧಾನ್ಯ, ಹಣ್ಣು ಹಾಗೂ ತರಕಾರಿಗಳು ನೈಸರ್ಗಿಕ ಪೌಷ್ಟಿಕಾಂಶಗಳಿದ ಸಮೃದ್ಧವಾಗಿರುತ್ತವೆ. ಆದ್ದರಿಂದಲೇ ಸಾವಯವ ಪದ್ಧತಿಯಲ್ಲಿ ಬೆಳೆಯವ ಕೆಲವು ಧಾನ್ಯಗಳನ್ನು ‘ಸಿರಿ ಧಾನ್ಯ’ ಗಳು ಎಂದು ಕರೆಯಲಾಗುತ್ತದೆ. ಹೀಗೇ, ಪರಿಸರ ಸ್ನೇಹಿಯಾಗಿ ಮಾಲಿನ್ಯ ಮುಕ್ತ ಕೃಷಿ ಪದ್ಧತಿಯಾಗಿರುವ ಸಾವಯವ ವಿಧಾನವು, ಇತ್ತೀಚಿನ ಜಗತ್ತಿನ ಬಹುದೊಡ್ಡ ಅವಶ್ಯಕತೆಯಾಗಿದೆ. ಇನ್ನು, ಸಾವಯವ ಕೃಷಿಯ ಉಪಯೋಗಗಳು ಹಲವಾರು. ಮುಖ್ಯವಾಗಿ, ಈ ವಿಧಾನದಲ್ಲಿ ದೀರ್ಘಕಾಲದವರೆಗೆ ತೋಟದ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಬಹುದು. ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೇ ಕೂಡ ಕೃಷಿಯನ್ನು ಲಾಭದಾಯಕವಾಗಿಸಬಹುದು.
ಹಾಗೇ, ತೋಟಗಳಲ್ಲಿ ಸಾವಯವ ಕೃಷಿಯಿಂದ ಮಣ್ಣಿನ ಫಲವತ್ತತೆಯ ಹೆಚ್ಚಾಗುವ ಕಾರಣದಿಂದ, ಈ ಹಿಂದೆ ಬಿತ್ತದೆ ಇರುವಂತಹ ಬೆಳೆಗಳನ್ನು ಸಹ ಬಿತ್ತನೆ ಮಾಡಿ ಯಶಸ್ವಿಯಾಗಬಹುದು. ಸಾವಯವ ಕೃಷಿ ಪದ್ದತಿಯ ಅಳವಡಿಕೆಯಿಂದ, ಪ್ರಾಣಿಗಳು ಸೇವಿಸುವ ಮೇವು ಸಹ ರಾಸಾಯನಿಕ ಮುಕ್ತವಾಗಿರುವ ಕಾರಣದಿಂದ ಉತ್ತಮ ಗುಣಮಟ್ಟದ ಹಾಲು ಮತ್ತು ಜಾನುವಾರುಗಳಲ್ಲಿ ಉತ್ತಮ ಆರೋಗ್ಯ ಕಾಣಬಹುದು. ಸಾವಯವ ಕೃಷಿಯು, ಪ್ರಾಣಿಗಳು ಮತ್ತು ಮನುಷ್ಯನ ಆರೋಗ್ಯದ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರುತ್ತದೆ. ಈ ಪದ್ಧತಿಯಿಂದ ಅನೇಕ ರೋಗಗಳಿಂದ ತಡೆಗಟ್ಟಬಹುದು, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡ ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆ ಎದುರಾದರೂ, ದೀರ್ಘಾವಧಿಯವರೆಗೆ ಬೆಳೆಗಳ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಉತ್ತಮ ಲಾಭವನ್ನೂ ಪಡೆಯಬಹುದು. ಇಂತಹ ಸಾವಯವ ಕೃಷಿಯಲ್ಲಿ, ಸಾವಯವ ಕೃಷಿಕರು ಅಳವಡಿಸಿಕೊಳ್ಳಬೇಕಿರುವ ಕೆಲವು ವಿಧಾನಗಳ ಬಗ್ಗೆ ನೋಡೋಣ.
*ಇತ್ತೀಚೀನ ದಿನಗಳಲ್ಲಿ ಪಾಲಿಕಲ್ಚರ್ ಅಥವಾ ಮಿಶ್ರಬೆಳೆ ಪದ್ಧತಿ ಜನಪ್ರಿಯವಾಗಿದೆ. ವಿಧಾನದಲ್ಲಿ, ಒಂದೇ ಜಮೀನಿನಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳ ವೈವಿಧ್ಯತೆಯು ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ಋತುವಿನಿಂದ ಋತುವಿಗೆ ಬದಲಾಗುತ್ತದೆ. ನಮ್ಮ ಹಿರಿಯರು, ಎಂದರೆ ತಾತ ಮುತ್ತಾತಂದಿರು, ಅವರ ಅಪ್ಪ, ಅಜ್ಜಂದಿರು ಈ ಪದ್ಧತಿ ಅನುಸರಿಸುತ್ತಿದ್ದರು. ಆದರೆ ಕಾಲಕ್ರಮೇಣ ನಾವು ಇದನ್ನು ಕೈಬಿಟ್ಟು, ಮೋನೊಕಲ್ಚರ್ ಅಂದರೆ ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಆದರೆ, ಬಹು ಬೆಳೆ ಅಥವಾ ಮಿಶ್ರ ಬೆಳೆ ಪದ್ಧತಿಯು ಸಾವಯವ ಕೃಷಿಯ ಅತಿ ಮುಖ್ಯವಾದ ಭಾಗವೇ ಸರಿ. ಒಂದು ತುಂಡು ಭೂಮಿಯಲ್ಲಿ ಹಲವು ರೀತಿಯ ಬೆಳೆಗಳನ್ನು ಬೆಳೆಯುವುದು ಈ ಪದ್ಧತಿಯ ಮುಖ್ಯ ಗುಣಗಳಲ್ಲಿ ಒಂದಾಗಿದೆ.
- ಸಕಲ ಜೀವರಾಶಿಗಳಿಗೂ ಮಣ್ಣೇ ಮೂಲ. ‘ಮಣ್ಣಿಂದ ಕಾಯ ಮಣ್ಣಲ್ಲಿ ಮಾಯ’ ಎನ್ನುವಂತೆ ಕೃಷಿ ಅಥವಾ ವ್ಯವಸಾಯ ನಿಂತಿರುವುದೇ ಮಣ್ಣಿನ ಮೇಲೆ. ಹೀಗಾಗಿ ಮಣ್ಣನ್ನು ಎಚ್ಚರಿಕೆಯಿಂದ ಕಾಪಾಡುವುದು ನಮ್ಮ ಕರ್ತವ್ಯ. ಸಾವಯವ ಕೃಷಿ ಪದ್ಧತಿಯಲ್ಲಿ, ಮಣ್ಣಿನ ಗುಣಗಳು ಮತ್ತು ಅದರ ಗುಣಮಟ್ಟವನ್ನು ನೈಸರ್ಗಿಕ ನಿರ್ವಹಣೆ ಮಾಡುವುದಕ್ಕೆ ಪ್ರಥಮ ಆದ್ಯತೆಯಿದೆ. ಈ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ, ಬದಲಿಗೆ ಮಣ್ಣಿನಲ್ಲಿ ಜೀವಾಣುಗಳನ್ನು ಹೆಚ್ಚಿಸುವ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ, ದ್ರಾವಣಗಳನ್ನು ಬಳಸುವುದರಿಂದ ಮಣ್ಣು ಯಾವಾಗಲೂ ಫಲವತ್ತಾಗಿರುತ್ತದೆ.
- ಜೀವನದಲ್ಲಿ ಕಷ್ಟಗಳಿದ್ದಂತೆ, ಕೃಷಿಯಲ್ಲಿ ಕಳೆ ಗಿಡಗಳು ಇರಲೇಬೇಕು. ಕಳೆ ಗಿಡಗಳು ಯಾವ ಬೆಳೆಯನ್ನೂ ಕಾಡದೆ ಬಿಟ್ಟಿಲ್ಲ. ಕೃಷಿ ಪದ್ಧತಿ ಯಾವುದೇ ಇರಲಿ ಬೆಳೆಗಳ ನಡುವೆ ಸೇರಿಕೊಳ್ಳುವುದು ತನ್ನ ಹಕ್ಕು ಎನ್ನುವಂತೆ ಕಳೆ ಗಿಡಗಳು ಹುಟ್ಟುತ್ತವೆ. ಆದರೆ ಸಾವಯವ ಕೃಷಿಕರು ಬುದ್ಧಿ ಉಪಯೋಗಿಸಿ, ಈ ಕಳೆಯನ್ನೇ ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ. ಸಾವಯವ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಜತ್ರೋಪ, ಡಯಾಂಚ, ವೆಲ್ವೆಟ್ ಬೀನ್ಸ್, ಅಲಸಂದಿ ಮತ್ತಿತರ ಬೆಳೆಗಳನ್ನು ಬೆಳೆಸಿ, ಅವು ಒಂದು ಹಂತಕ್ಕೆ ಬೆಳೆದ ನಂತರ ಅವುಗಳನ್ನು ಕತ್ತರಿಸಿ ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಹೀಗೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಉತ್ತಮಗೊಳ್ಳುತ್ತದೆ.
- ಮಣ್ಣಿನಲ್ಲಿ ಕೃಷಿಗೆ ಸಹಾಯ ಮಾಡುವ ಜೀವಿಗಳು ಇರುವಂತೆ, ಹಾನಿಕಾರಕ ಜೀವಿಗಳೂ ಇರುತ್ತವೆ. ಇವು ಸದ್ದಿಲ್ಲದಂತೆ ದಾಳಿ ಮಾಡಿ ಬೆಳೆಯನ್ನು ನಾಶ ಮಾಡುತ್ತವೆ. ಆಧುನಿಕ ಕೃಷಿ ಪದ್ಧತಿಯಲ್ಲಾದರೆ ರಾಸಾಯನಿಕ ಕ್ರಿಮಿನಾಶಕಗಳನ್ನು ಸಿಂಪಡಿಸಿ ಇಂತಹ ಜೀವಿಗಳ ಕಾಟ ತಪ್ಪಿಸಬಹುದು. ಆದರೆ, ಸಾವಯವ ಕೃಷಿಯಲ್ಲಿ ಏನು ಮಾಡಬೇಕು ಎನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ ಸಾವಯವ ವಿಧಾನದ ಮೂಲಕವೂ ಈ ಹಾನಿಕಾರ ಜೀವಿಗಳನ್ನು ನಿಯಂತ್ರಿಸಬಹುದು. ಈ ಪದ್ಧತಿಯಲ್ಲಿ ನೀಮಾಸ್ತಂ, ದಶಪರ್ಣಿ, ಅಗ್ನಿಅಸ್ತಂ, ಬೇವಿನ ಕಷಾಯ ಸೇರಿದಂತೆ ಹಲವಾರು ಔಷಧಗಳಿವೆ. ಇವುಗಳನ್ನು ಮರಗಳ ಎಲೆ ಹಾಗೂ ಕಾಯಿಗಳಿಂದಲೇ ತಯಾರಿಸುವುದರಿಂದ ಭೂಮಿಗೆ ಇವುಗಳಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಸಾವಯವ ಕೀಟನಾಶಕಗಳ ಮೂಲಕವೇ ಬೆಳೆಯ ರೋಗಗಳು, ಕೀಟ ಬಾಧೆ ತಡೆಗಟ್ಟುವುದು ಸಹ ಸಾವಯವ ಕೃಷಿ ಪದ್ಧತಿಯ ಮೂಲ ಮಂತ್ರವಾಗಿದೆ.
- ಜಾನುವಾರುಗಳು, ಅದರಲ್ಲೂ ದೇಸಿ ತಳಿ ಜಾನುವಾರುಗಳು ಸಾವಯವ ಕೃಷಿಯ ಅವಿಭಾಜ್ಯ ಅಂಗ ಎಂದರೆ ತಪ್ಪಿಲ್ಲ. ಸಾವಯವ ಕೃಷಿ ಪದ್ಧತಿ ನಿಂತಿರುವುದೇ ಈ ಜಾನುವಾರುಗಳ ಮೇಲೆ ಎನ್ನುವುದು ಇನ್ನೂ ಸೂಕ್ತ. ಕೊಟ್ಟಿಗೆ ಗೊಬ್ಬರ, ದೇಸಿ ಹಸುಗಳ ಸೆಗಣಿ, ಗೋಮೂತ್ರ, ಕುರಿ, ಕೋಳಿ ಗೊಬ್ಬರಗಳು ಸಾವಯವ ಕೃಷಿಯಲ್ಲಿ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಿ, ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಕೆಲಸ ಮಾಡುತ್ತವೆ. ಬೆಳೆ ಕಟಾವಿನ ನಂತರ, ಬಿತ್ತನೆಗೆ ಕೆಲ ದಿನ ಉಳಿದಿರುವ ಸಂದರ್ಭದಲ್ಲಿ, ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸುವುದು ಕೂಡ ಸಾವಯವ ಕೃಷಿಗೆ ಪೂರಕವಾಗಿದೆ.
ಇನ್ನು, ನೈಸರ್ಗಿಕ ಸಂಪನ್ಮೂಲಗಳನ್ನು ಮಾತ್ರವೇ ಬಳಸಲು ಸಾವಯವ ಕೃಷಿ ಪ್ರೋತ್ಸಾಹಿಸುತ್ತದೆ. ಇಲ್ಲಿ ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳ ಮೂಲಕವೇ ಕೃಷಿ ಮಾಡಬೇಕಾಗುತ್ತದೆ. ಉಳುಮೆಗೆ ಎತ್ತುಗಳು, ಮರದ ನೇಗಿಲನ್ನು ಬಳಸುವುದು, ಬಿತ್ತನೆ ನಂತರ ಪದೇ ಪದೆ ಭೂಮಿಯನ್ನು ಉಳುಮೆ ಮಾಡುವುದನ್ನು ಬಿಟ್ಟು, ಬೆಳೆದ ಕಳೆಯನ್ನು ಕತ್ತಿ, ಕುಡುಗೋಲು ಮತ್ತಿತರ ಸಾಧನಗಳಿಂದ ಕತ್ತರಿಸುವುದು ಸಾವಯವ ಕೃಷಿಯ ಭಾಗವಾಗಬೇಕು. ಟ್ರ್ಯಾಕ್ಟರ್ ಮತ್ತಿತರ ಯಂತ್ರೋಪಕರಣಗಳ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸುವುದು ಸೂಕ್ತ.
ಇದನ್ನು ಓದಿ … ಅರಣ್ಯಕೃಷಿ ಎಂದರೇನು..? What is Agroforestry?
ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.