ಸಹಜ ಕೃಷಿಯಲ್ಲಿ ಬೇವು ಅತ್ಯಂತ ಉಪಯುಕ್ತವಾಗಿದೆ, ಇದನ್ನು ಕೀಟನಾಶಕಗಳ ರೂಪದಲ್ಲಿ ಹಾಗೂ ಭೂಮಿಯ ಫಲವರ್ಧನೆ ವೃದ್ಧಿಸಿಕೊಳ್ಳಲು ಬಳಸಲಾಗುತ್ತದೆ. ಬೇವಿನಿಂದ ಮಾಡಿದ ಕೀಟನಾಶಕಗಳನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡುವುದರಿಂದ ಮಾನವರಿಗೆ ಹಾಗೂ ಇತರ ಜೀವಿಗಳಿಗೆ ಯಾವುದೇ ಹಾನಿಯಿಲ್ಲ. ಹಾಗಾಗಿ, ಇದನ್ನು ಬೆಳೆಗೆ ತಗಲುವ ರೋಗ ನಿಯಂತ್ರಣ ಹಾಗೂ ಕೀಟನಾಶಕವಾಗಿ ಬಳಸಬಹುದೆಂದು ತಜ್ಞರು ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಇದನ್ನು ನಾವು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೇವೆ ಎನ್ನುವುದನ್ನು ಸ್ವ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.
ಏಕೆಂದರೆ, ರಾಸಾಯನಿಕ ಕೀಟನಾಶಕಗಳ ಬಳಕೆ, ಗಾಳಿ, ನೀರು, ಮನುಷ್ಯನ ಆರೋಗ್ಯ, ಹಾಗೂ ಪಕ್ಷಿಸಂಕುಲಕ್ಕೆ ಮಾರಕವಾಗಿದೆ. ಹಾಗಾಗಿ, ನೈಸರ್ಗಿಕವಾಗಿ ದೊರೆಯುವ ಸಸ್ಯಜನ್ಯ, ಪ್ರಾಣಿಜನ್ಯಗಳ ಬಳಕೆಯಿಂದ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರ ರೋಗಗಳ ನಿಯಂತ್ರಣವನ್ನು ಸಮರ್ಥವಾಗಿ ಮಾಡಬಹುದು. ಜೊತೆಗೆ ಇದು ಬೆಳೆಗಳಿಗೆ ಲಘು ಪೋಷಕಾಂಶಗಳಾಗಿ ಹಾಗೂ ಕೀಟನಾಶಕಗಳಾಗಿಯೂ ಕಾರ್ಯನಿರ್ವಹಿಸುತ್ತದೆ ಎನ್ನುವುದು ವಿಶೇಷ.
ಸಸ್ಯ ಮೂಲಗಳಿಂದ ತಯಾರಿಸಿದ ಕೀಟನಾಶಕಗಳು ಯಾವುವು ಎಂದು ನೋಡುವುದಾದರೆ:
ಸಹಜ ಕೃಷಿಯಲ್ಲಿ ಬೇವಿನ ಬೀಜ ಹಾಗೂ ಎಲೆಗಳನ್ನು ರೈತರು ಶತಮಾನಗಳಿಂದಲೂ ಬಳಸಿಕೊಂಡು ಬಂದಿದ್ದಾರೆ. ಬೇವಿನ ಮರವು ರೈತರಿಗೆ ಪ್ರಕೃತಿ ನೀಡಿದ ವರದಾನವಾಗಿದ್ದು, ಇದು 413 ಜಾತಿಯ ಕೀಟಗಳನ್ನು ನಿಗ್ರಹಿಸುವುದಲ್ಲದೇ ಅನೇಕ ಶಿಲೀಂದ್ರ ಮತ್ತು ಜಂತುಗಳನ್ನು ನಿಯಂತ್ರಿಸುತ್ತದೆ. ಬೇವಿನ ಗಿಡದಿಂದ ತಯಾರಿಸಿದ ಕೀಟನಾಶಕ ಕಡಿಮೆ ಖರ್ಚಿನಲ್ಲಿ ದೊರೆಯುವುದರ ಜೊತೆಗೆ, ದುಷ್ಪರಿಣಾಮ ರಹಿತವಾಗಿ ಸುಸ್ಥಿರ ಅಭಿವೃದ್ಧಿಗೆ ನಿಸರ್ಗವೇ ನೀಡಿದ ವರದಾನವಾಗಿದೆ.
ಬೇವಿನ ಎಲೆ ಸಾರಾ :-
ಬೇವಿನ ಬೀಜ ಮತ್ತು ಎಲೆಗಳಿಂದ ರೈತರು ಕಷಾಯವನ್ನು ತೆಗೆದು ಬೆಳೆಯನ್ನು ಕೀಟ ಪೀಡೆಗಳಿಂದ ರಕ್ಷಣೆ ಮಾಡಬಹುದು. ಬೇವಿನ ಬೀಜಗಳಿಂದ ಎಣ್ಣೆ ತೆಗೆದ ಹಿಂಡಿಯನ್ನ, ಗೆದ್ದಲು ಜಂತುಹುಳು ಮತ್ತು ಗೋಣೆ ಹುಳು ನಾಶಕ್ಕೆ ಬಳಸಬಹುದು. ಬೇವಿನಲ್ಲಿರುವ ವಿಷವಸ್ತುಗಳು ಹಾನಿಕಾರಕ ಕೀಟಗಳನ್ನು ನಾಶಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಒಂದು ಹೆಕ್ಟೇರಿಗೆ ಬೇಕಾಗುವ ಕೀಟನಾಶಕವನ್ನು ತಯಾರಿಸಲು 25 ರಿಂದ 30 ಕಿಲೋ ಗ್ರಾಂ ಬೇವಿನ ಬೀಜವನ್ನು ಕುಟ್ಟಿ ಪುಡಿಮಾಡಿ, ಬಟ್ಟೆ ಚೀಲದಲ್ಲಿ ಹಾಕಿ ಒಂದು ರಾತ್ರಿ ನೆನೆಯಲು ಬಿಡಬೇಕು. ಹೀಗೆ ನೆನೆಸಿದ ಬೇವಿನ ಬೀಜದ ಪುಡಿಯನ್ನು ಚೆನ್ನಾಗಿ ಹಿಂಡಿ ದ್ರಾವಣ ತೆಗೆದು 800 ಲೀಟರ್ ನೀರಿಗೆ ಬೆರೆಸಿ, 250ರಿಂದ 800 ಗ್ರಾಂ ಸಾಬೂನಿನ ಪುಡಿಯನ್ನು ಬಳಸಿ ಬೆಳೆಗೆ ಸಿಂಪರಣೆ ಮಾಡಬೇಕು. ಅಥವಾ ಬೇವಿನ ಹಿಂಡಿ ಸಾರವನ್ನು ಕೂಡ ಬಳಸಬಹುದು. ಅದನ್ನು ಮಾಡುವ ವಿಧಾನ ಹೀಗಿದೆ :
ಒಂದು ಎಕರೆಗೆ 5 ಕೆಜಿ ಬೇವಿನ ಹಿಂಡಿಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಒಂದು ಬಟ್ಟೆಯಲ್ಲಿ ಹಾಕಿ ಕಟ್ಟಿ ಇದನ್ನು 10 ಲೀಟರ್ ನೀರಿನಲ್ಲಿ ಮೂರು ದಿನ ನೆನೆಸಿಡಬೇಕು. ನಂತರ ಆ ಗಂಟನ್ನು ಹಿಂಡಿದಾಗ 7 ರಿಂದ 8 ಲೀಟರ್ ದ್ರಾವಣ ಸಿಗುತ್ತದೆ. ಇದನ್ನು 1 ಲೀಟರ್ ನೀರಿಗೆ 50 -100 ಮಿಲಿ ಪ್ರಮಾಣದಲ್ಲಿ 10 ಮಿಲಿ ಸಾಬೂನಿನೊಂದಿಗೆ ಸಿಂಪಡಿಸಬೇಕು
ಬೇವಿನ ಎಣ್ಣೆ :-
ಒಂದು ಎಕರೆಗೆ 1200-1800 ಮಿಲಿ ಬೇವಿನ ಎಣ್ಣೆ ಬೇಕಾಗುತ್ತದೆ. ಇದನ್ನು ಮಾಡುವ ವಿಧಾನ ಹೀಗಿದೆ,
1 ಲೀಟರ್ ನೀರಿಗೆ 20 ರಿಂದ 30 ಮಿಲೀ ಬೇವಿನ ಎಣ್ಣೆಯನ್ನು 10 ಮಿಲಿ ಸಾಬೂನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಕ್ಷಣ ಸಿಂಪರಣೆ ಮಾಡಬೇಕು. ಇಲ್ಲದಿದ್ದರೆ, ಎಣ್ಣೆ ನೀರಿನಿಂದ ಬೇರ್ಪಟ್ಟು ತೇಲುತ್ತದೆ. ಸಿಂಪರಣೆಗೆ ಯಾಂತ್ರಿಕ ಸ್ಪ್ರೇಯರ್ ಬಳಸಬಹುದು. ಎಫಿಡ್,ಕಂದು, ಮತ್ತು ಹಸಿರು ಜಿಗಿ ಹುಳು, ವಜ್ರ ಬೆನ್ನಿನ ಪತಂಗ, ಬೇರು ಗಂಟು ಹುಳು, ಕಾಂಡಕೊರಕ ಮುಂತಾದ ಹೆಚ್ಚಿನ ಎಲ್ಲಾ ಕೀಟಗಳ ವಿರುದ್ಧ ಬೇವಿನ ಸಾರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.
ಸಸ್ಯಜನ್ಯ ಕೀಟನಾಶಕಗಳ ಬಳಕೆಯೂ ಬಹುಮಟ್ಟಿಗೆ ಜನಪ್ರಿಯವಾಗಿದ್ದು, ತಯಾರಿಕಾ ವಿಧಾನ ಹೀಗಿದೆ:
ಮೊದಲನೇ ವಿಧಾನ : ಒಂದು ಎಕರೆಗೆ, 200 ಲೀಟರ್ ಹಿಡಿಯುವ ಪ್ಲಾಸ್ಟಿಕ್ ಡ್ರಮ್ ಗೆ, 10 ಲೀಟರ್ ಗೋಮೂತ್ರ, 10 ಕೆಜಿ ಸಗಣಿ, 2 ಕೆಜಿ ಬೆಲ್ಲ ಹಾಗೂ 2ಕೆಜಿ ದ್ವಿದಳಧಾನ್ಯ ಹಿಟ್ಟು( ಇಲ್ಲಿ ಎಣ್ಣೆಕಾಳುಗಳ ಹಿಟ್ಟು ಬಳಸಬಾರದು), ಹಾಗೂ 2ಕೆಜಿ ಬದುವಿನ ಮಣ್ಣನ್ನ 200 ಲೀಟರ್ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿಡಬೇಕು. ಜೀವಾಮೃತದಲ್ಲಿ ಸೂಕ್ಷ್ಮಾಣುಜೀವಿಗಳು ಪ್ರತಿ 20 ನಿಮಿಷಕ್ಕೆ ದ್ವಿಗುಣಗೊಳ್ಳುತ್ತವೆ. ನಂತರ ಇದನ್ನು ನೀರಿನ ಜೊತೆಗೆ ಸಿಂಪರಣೆ ಮಾಡಬೇಕು, ಇದನ್ನು ಎಲ್ಲ ಬೆಳೆಗಳಿಗೂ ಬಳಸಬಹುದು. ಆದರೆ 15 ದಿನಕ್ಕೊಮ್ಮೆ ಮಾತ್ರ ಸಿಂಪರಣೆ ಮಾಡಬೇಕು. 100 ಲೀಟರ್ ನೀರಿಗೆ 5 ಲೀಟರ್ ತಯಾರಿಸಿದ ಜೀವಾಮೃತವನ್ನು ಬೆರೆಸಿ, ನಂತರ ಬೆಳೆಗೆ ಸಿಂಪರಣೆ ಮಾಡಬೇಕು.
ಎರಡನೇ ವಿಧಾನ: ಗೋಮೂತ್ರವನ್ನು ಒಂದು ವಾರ ಮಡಿಕೆಯಲ್ಲಿಟ್ಟು ಉಳಿ ಬರುವಂತೆ ಮಾಡಬೇಕು. ನಂತರ ಇದನ್ನು 1 ಲೀಟರ್ ನೀರಿಗೆ 50 ರಿಂದ 100 ಮಿಲಿ ಪ್ರಮಾಣದಲ್ಲಿ ಹಾಕಿ ಸಿಂಪರಣೆ ಮಾಡಬೇಕು. ಅಥವಾ 1 ಲೀಟರ್ ಗೋಮೂತ್ರ, 1 ಲೀಟರ್ ಹುಳಿಮಜ್ಜಿಗೆ ಹಾಗೂ 8 ಲೀಟರ್ ನೀರನ್ನು ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡಬಹುದು. ಇದು ಲಘು ಪೋಷಕಾಂಶವಾಗಿ, ಕೀಟ ವಿಕರ್ಷಕವಾಗಿ ಮತ್ತು ರೋಗ ನಿಯಂತ್ರಕವಾಗಿ ಕೂಡ ಕೆಲಸ ಮಾಡುತ್ತದೆ.
ಮೂರನೇ ವಿಧಾನ: 100 ಲೀಟರ್ ಗೋಮೂತ್ರ, ಒಂದು ಕೆಜಿ ಬೇವಿನ ಎಲೆ, ಮೂರು ಕೆಜಿ ಪರಂಗಿ ಎಲೆ, 3 ಕೆಜಿ ಹೊಂಗೆ ಎಲೆಗಳನ್ನು ಒಂದು ಪ್ಲಾಸ್ಟಿಕ್ ಡ್ರಮ್ ನಲ್ಲಿ ಹಾಕಿ ನೆರಳಿನಲ್ಲಿ 15 ದಿನ ಇರಿಸಬೇಕು. ಹೀಗೆ ತಯಾರಿಸಿದ ಸಾರವನ್ನು 1 ಲೀಟರ್ ನೀರಿಗೆ, 5 ರಿಂದ 10 ಮಿಲೀ ಹಾಕಿ ಸಿಂಪಡಿಸುವುದು ಹೆಚ್ಚಿನ ಎಲ್ಲಾ ಕೀಟ ರೋಗಗಳಿಗೆ ರಾಮಬಾಣವಾಗಿದೆ.
ನಾಲ್ಕನೇ ವಿಧಾನ: ಅರ್ಧ ಕೆಜಿ ಶುಂಠಿ, 1 ಕೆಜಿ ಬೆಳ್ಳುಳ್ಳಿ, ಅರ್ಧ ಕೆಜಿ ಹಸಿಮೆಣಸಿನಕಾಯಿಯನ್ನು ಚೆನ್ನಾಗಿ ಅರೆದು ಚಟ್ನಿ ಮಾಡಬೇಕು. ಇದನ್ನ 7 ಲೀಟರ್ ನೀರಿಗೆ ಮಿಶ್ರಣ ಮಾಡಿ ಸೋಸಬೇಕು. ಈ ಸಾರವನ್ನು ಒಂದು ಲೀಟರ್ ನೀರಿಗೆ 50 ರಿಂದ 100 ಮಿಲಿ, 10 ಮಿಲಿ ಸಾಬೂನಿನೊಂದಿಗೆ ಸಿಂಪರಿಸಬೇಕು. ಈ ಮಿಶ್ರಣವನ್ನು 3 ದಿನ ಇಡಬಹುದು, ಆದರೆ ತಾಜಾ ಇದ್ದಾಗಲೇ ಸಿಂಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೀಟ ವಿಕರ್ಷಕವಾಗಿ ಹಾಗೂ ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತದೆ.
ಇತರ ನೈಸರ್ಗಿಕ ಕೀಟನಾಶಕಗಳು:
-ಬೆಳ್ಳುಳ್ಳಿಯ ಗಡ್ಡೆ, ಎಲೆ, ಹೂ, ಮತ್ತು ಎಣ್ಣೆ ಬಳಸುವುದರಿಂದ ಎಫಿಡ್, ಆರ್ಮಿವರ್ಮ್, ಬ್ಯಾಕ್ಟೀರಿಯಾ, ಕೊಲೆರಾಡೋ ದುಂಬಿ ಹಾಗೂ ಭತ್ತಕ್ಕೆ ಉಂಟಾಗುವ ಬೆಂಕಿ ರೋಗಗಳ ವಿರುದ್ಧ ಬಳಸಬಹುದು.
-ಹಾಗೆಯೇ, ಹೆಚ್ಚಿನ ಬಗೆಯ ಕೀಟಗಳ ನಿಯಂತ್ರಣಕ್ಕೆ ನೆಲ ಬೇವಿನ ಕಷಾಯ ಪರಿಣಾಮಕಾರಿ. ಸ್ಪೀಡ್ ಮತ್ತಿತರ ರಸ ಹೀರುವ ಕೀಟಗಳಿಗೆ, ಮತ್ತು ಶೀಲಿಂದ್ರ ರೋಗಗಳಿಗೆ ಆಡುಸೋಗೆ ಕಷಾಯ ಪರಿಣಾಮಕಾರಿಯಾಗಿದೆ.
-ಜೈವಿಕವಾಗಿ ಕೀಟ ನಿಯಂತ್ರಣಕ್ಕೆ ಸೂಕ್ತವಾದ ಸಸ್ಯ ಪ್ರಭೇದಗಳೆಂದರೆ ಮುಡಿಗೆಣಸು. ಈ ಸಸ್ಯ ಎಫಿಡ್, ಜಿಗಟ, ಮರಿಹುಳು, ಹಾಗೂ ಮ್ಯಾನೆಟ್ ಗಳ ನಿಯಂತ್ರಣಕ್ಕೆ ಬಲು ಪರಿಣಾಮಕಾರಿ.
-ಕಾಕೆ ಪಟ್ಲು ಸಸ್ಯವನ್ನು ಎಫಿಡ್ ಹಾಗೂ ಹೇನು ನಿಯಂತ್ರಣಕ್ಕೆ ಬಳಸಬಹುದು.
-ಶುಂಠಿಯ ಕೊಂಬುಗಳನ್ನು ಅಮೆರಿಕನ್ ಬೋಲ್ವೇರ್, ಎಫಿಡ್ ಹಾಗೂ ಬೇಳೆಕಾಳುಗಳನ್ನು ಭಾದಿಸುವ ದುಂಬಿಗಳ ನಿಯಂತ್ರಣಕ್ಕೆ ಬಳಸಬಹುದು. ಇವು ಕೀಟ ವಿಕರ್ಷಕವಾಗಿ, ರೋಗ ನಿಯಂತ್ರಕವಾಗಿ ಕೆಲಸ ಮಾಡುತ್ತವೆ. ಬೆಳೆಗಳಿಗೆ ಲಘು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಬ್ಯಾಕ್ಟಿರಿಯ ಹಾಗೂ ಶಿಲೀಂದ್ರಗಳನ್ನು ಕೂಡ ನಾಶಪಡಿಸುತ್ತವೆ.
ನೈಸರ್ಗಿಕವಾಗಿ ತಯಾರಿಸಿದ ಇಂತಹ ಕೀಟನಾಶಕಗಳ ಬಳಕೆಯಿಂದ, ಬೆಳೆಗಳಿಗೆ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ. ನೈಸರ್ಗಿಕ ಕೀಟನಾಶಕಗಳು ಪ್ರಕೃತಿಯ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.
ಕೀಟನಾಶಕವಾಗಿ ಬೇವಿನ ಕಷಾಯವನ್ನು ಬಳಸುವುದರ ಅನುಕೂಲತೆಗಳು:
*ಪ್ರಕೃತಿಯಲ್ಲಿ ಅನೇಕ ಜೀವಿಗಳು, ಮನುಷ್ಯನಿಗೆ ಉಪಯೋಗಕರವಾದ ಕೀಟಗಳೂ ಇವೆ. ರಾಸಾಯನಿಕ ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಕೆ ಮಾಡುವುದರಿಂದ ಪ್ರಕೃತಿಯ ಸಮತೋಲನಕ್ಕೆ ತೊಂದರೆಯಾಗುವುದು ಖಂಡಿತ. ಹಾಗಾಗಿ ನೈಸರ್ಗಿಕವಾಗಿ ಬೇವಿನ ಕಷಾಯ ಸಿಂಪರಣೆ ಮಾಡುವುದರಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ.
*ಕೀಟಗಳ ಉಸಿರಾಟಕ್ಕೆ ತೊಂದರೆ:
ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟಗಳು ಬೇಗ ಸಾಯುತ್ತವೆ. ಆದರೆ ಬೇವಿನ ಕೀಟನಾಶಕ ಸಿಂಪರಣೆ ಮಾಡುವಾಗ ಹಾನಿಕಾರಕ ಕೀಟಗಳು ತಕ್ಷಣ ಸಾಯುವುದಿಲ್ಲ, ಕಾಲಕ್ರಮೇಣ ಅದರ ಸಂತತಿ ನಾಶವಾಗುತ್ತದೆ. ಬೆಳೆಗಳ ಮೇಲೆ ಅದನ್ನು ಸಿಂಪಡಿಸಿದಾಗ, ಕೀಟಗಳು ಅಂತಹ ಎಲೆಯಿಂದ ರಸವನ್ನು ಹೀರುತ್ತವೆ. ಆಗ, ಬೇವಿನ ಕಷಾಯ ಕೀಟಗಳ ದೇಹವನ್ನು ಹೊಕ್ಕು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕಷಾಯವನ್ನು ಸೇವಿಸಿದರೆ ಕೀಟಗಳಿಗೆ ವಾಕರಿಕೆ ಆರಂಭವಾಗುತ್ತದೆ, ಬಳಿಕ ಹಲವು ದಿನಗಳವರೆಗೆ ಕೀಟಗಳು ಆಹಾರ ಸೇವಿಸಲು ಸಾಧ್ಯವಾಗದೇ ನಿತ್ರಾಣಗೊಂಡು ಸಾಯುತ್ತವೆ. ಕೆಲವು ಮೊಂಡು ಕೀಟಗಳು ಬದುಕಿದರೂ, ಅವುಗಳ ಸಂತಾನ ಶಕ್ತಿಯನ್ನು ಈ ಬೇವಿನ ಕಷಾಯ ನಾಶಪಡಿಸುವಷ್ಟು ಸಮರ್ಥವಾಗಿರುತ್ತದೆ.
*ಬೇವಿನ ಕಷಾಯ ಪರಿಸರ ಸ್ನೇಹಿಯಾಗಿದೆ:
ಬೇವಿನ ಇನ್ನೊಂದು ಅನುಕೂಲತೆ ಎಂದರೆ, ಬೇವಿನ ಬೀಜಗಳು ಪರಿಸರ ಸ್ನೇಹಿಯಾಗಿವೆ. ಇದು, ಹಾನಿಕಾರಕ ಕೀಟಗಳನ್ನು ಹೊರತುಪಡಿಸಿ ಬೇರಾವುದೇ ಪ್ರಾಣಿ, ಪಕ್ಷಿ ಅಥವಾ ಮಾನವರಿಗೆ ಕೆಡಕುಂಟು ಮಾಡುವುದಿಲ್ಲ, ಭೂಮಿಯ ಫಲವತ್ತತೆಗೂ ಯಾವುದೇ ತೊಂದರೆಯಾಗುವುದಿಲ್ಲ. ಅದೇ ರೀತಿ, ಮಣ್ಣಿನಲ್ಲಿನ ಕೃಷಿಗೆ ಸಹಾಯ ಮಾಡುವ ಸೂಕ್ಷ್ಮಾಣು ಜೀವಿಗಳಿಗೂ ಬೇವು ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಕೂಡ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನು ಓದಿ.. ಹ್ಯೂಮಸ್ ಎಂದರೇನು ಹ್ಯೂಮಸ್ ನಿಂದ ಏನೇನು ಪ್ರಯೋಜನಗಳಿವೆ ? What is humus and what are the benefits of humus?
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.