ಸಹಜ ಕೃಷಿಯಲ್ಲಿ ಜಾನುವಾರು ಗಳ ಮಹತ್ವ – Importance Of Animals In Oraganic Farming
Importance Of Animals In Oraganic Farming– ಸಾವಯವ ಕೃಷಿ ಮಾಡಲು ಭೂಮಿಯಷ್ಟೇ ಮುಖ್ಯವಾದದ್ದು ಜಾನುವಾರುಗಳ ಲಭ್ಯತೆ. ಸಾವಯವ ಕೃಷಿಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ವಿಜಯಪುರದ ರೈತರ ಬಗ್ಗೆ ಹೇಳುವುದಾದರೆ; ಸಾವಯವನ್ನೇ ಉಸಿರಾಗಿಸಿಕೊಂಡಿರುವ ಜಿಲ್ಲೆಯ ರೈತರು ಆಧುನಿಕ ಕೃಷಿಯಲ್ಲಿ ಯಂತ್ರಗಳ ಬಳಕೆ ಆರಂಭಿಸಿದ್ದರೂ ಜಾನುವಾರುಗಳ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಇದರ, ಪರಿಣಾಮವಾಗಿ ತನ್ನ ಸಂಗಾತಿಯಾದ ಗೋವು, ಎಮ್ಮೆ, ಕುರಿ-ಮೇಕೆ, ಕೋಳಿಗಳ ಸಾಕಾಣಿಕೆಯಲ್ಲೂ ಅನ್ನದಾತ ಮುಂಚೂಣಿಯಲ್ಲಿದ್ದಾನೆ.
ಇನ್ನು, ಸುಸ್ಥಿರ ಸಾವಯವ ಕೃಷಿಯಲ್ಲಿ ಪಶುಸಂಗೋಪನೆಯೂ ಮಹತ್ತರ ಪಾತ್ರ ವಹಿಸುತ್ತದೆ. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ನ್ಯಾಯ ಪಡೆಯಲು ರೈತರು ಬೆಳೆ ಉತ್ಪಾದನೆ ಜೊತೆಗೆ ಪಶುಸಂಗೋಪನೆಯನ್ನು ಕೂಡ ಸಮಗ್ರ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.
ಇತ್ತೀಚಿಗಂತೂ, ಸಾವಯವ ಕೃಷಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಸಾವಯವ ಬೆಳೆ ಉತ್ಪನ್ನದ ಜೊತೆಗೆ ಪಶು ಉತ್ಪನ್ನಗಳಿಗೂ ವಿಶೇಷ ಬೇಡಿಕೆಯಿದೆ. ಸಾವಯವ ಕೃಷಿಯಲ್ಲಿ ಸೆಗಣಿ, ಮೂತ್ರ ಹಾಗೂ ಇತರೆ ಪಶು, ಪಕ್ಷಿಗಳ ತ್ಯಾಜ್ಯಗಳ ಮರು ಬಳಕೆಯಿಂದ ಭೂಮಿಯ ಫಲವತ್ತತೆ ಕಾಯ್ದುಕೊಳ್ಳಲಾಗುತ್ತದೆ. ಜೊತೆಗೆ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸಿ ಕೃಷಿ ಉತ್ಪನ್ನವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಕಾರಣದಿಂದಾಗಿಯೇ ಪಶುಸಂಗೋಪನೆ ಸಾವಯವ ಕೃಷಿ ಪದ್ದತಿಯ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಇನ್ನು, ಸಾವಯವ ಪಶುಸಂಗೋಪನೆಯಲ್ಲಿ ಸ್ಥಳೀಯ ಜಾನುವಾರುಗಳು, ಹಾಗೂ ಕೋಳಿಗಳನ್ನು ಸಾಕುವುದು ಬಹಳ ಸೂಕ್ತ. ಏಕೆಂದರೆ ಇವುಗಳು ಸ್ವಾಭಾವಿಕವಾಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಆದರೆ, ಇಲ್ಲಿ ನೈಸರ್ಗಿಕ ಸಂತಾನೋತ್ಪತ್ತಿಗೆ ಅವಕಾಶ ಕೊಡಬೇಕು, ತಳಿ ಅಭಿವೃದ್ಧಿಗಾಗಿ ಕೃತಕ ಗರ್ಭಧಾರಣೆಗೆ ಅವಕಾಶವಿಲ್ಲ ಹಾಗೂ ಅದು ಸೂಕ್ತವೂ ಅಲ್ಲ.
ಪಶು ಸಂಗೋಪನೆಗಾಗಿ, ಸಾವಯವ ಪಶುಪಾಲನಾ ಕ್ಷೇತ್ರದಿಂದ ಕರು, ಕುರಿ ಮತ್ತು ಆಡಿನಮರಿ ಹಾಗೂ ಕೋಳಿ ಮರಿಗಳನ್ನು ತರಬೇಕಾಗುತ್ತದೆ. ಇಲ್ಲದಿದ್ದರೆ, ಜಾನುವಾರುಗಳ ಸಾಕಣೆ ಮಾಡುವವರಿಂದ ಎರಡು ದಿವಸದ ಕೋಳಿ ಮರಿ, ಮೊಟ್ಟೆ ಉತ್ಪಾದನೆಗಾಗಿ 18 ವಾರದ ಕೋಳಿ ಹಾಗೂ ನಾಲ್ಕು ವಾರದ ಪೂರ್ತಿ ಹಾಲು ಕುಡಿದ ಕರುಗಳನ್ನು ಸಾವಯವ ಕ್ಷೇತ್ರಕ್ಕೆ ತಂದು ಪಾಲನೆ ಮಾಡುವುದು ಸೂಕ್ತ.
ಇನ್ನು, ಸಾಮಾನ್ಯ ಪಶುಸಂಗೋಪನಾ ಘಟಕವನ್ನು ಸಾವಯವ ಘಟಕವನ್ನಾಗಿ ಪರಿವರ್ತಿಸುವುದಕ್ಕಾಗಿ, ಹನ್ನೆರಡು ತಿಂಗಳುಗಳ ಕಾಲ ಸಾವಯವ ಅಂಶಗಳ ಪಾಲನೆಯನ್ನು ಅನುಸರಿಸಬೇಕಾಗುತ್ತದೆ. ನಂತರವಷ್ಟೇ ಇದು ಸಾವಯವ ಪಶು ಘಟಕವಾಗಿ ಪರಿವರ್ತನೆ ಹೊಂದುತ್ತದೆ. ಕೋಳಿಗಳಲ್ಲಿ ಹಾಗೂ ಇತರ ಪಕ್ಷಿಗಳಲ್ಲಿ, 30 ದಿವಸ ಸಾವಯವ ಅಂಶಗಳ ಪಾಲನೆಯ ನಂತರವಷ್ಟೇ ಸಾವಯವ ಘಟಕವಾಗಿ ಪರಿವರ್ತನೆಯಾಗುತ್ತದೆ.
ಆದರೆ, ಇಲ್ಲಿ ನೆನಪಿಡಬೇಕಾದ ಮುಖ್ಯ ಅಂಶವೆಂದರೆ, ಜಾನುವಾರುಗಳಿಗೆ ಯೋಗ್ಯವಾಗುವಂತಹ ನೈಸರ್ಗಿಕ ಪರಿಸರ ಒದಗಿಸುವುದು ಅತೀ ಅವಶ್ಯಕ. ಜಾನುವಾರುಗಳಿಗಾಗಿ ಸ್ಥಳಾವಕಾಶ, ಹಿತಮಿತವಾದ ಗಾಳಿ, ಬೆಳಕು ಒದಗಿಸುವುದು, ಹಾಗೂ ಜಾನುವಾರುಗಳನ್ನು ಬಿಸಿಲು, ಮಳೆ ಹಾಗೂ ಗಾಳಿಯಿಂದ ಸಂರಕ್ಷಿಸುವುದು ಅತ್ಯಗತ್ಯ. ಅದೇ ರೀತಿ, ಜಾನುವಾರುಗಳಿಗೆ ತಿರುಗಾಡಲು ಹಾಗೂ ಮೇಯಲು ಸ್ವಾಭಾವಿಕ ಪರಿಸರ ಒದಗಿಸುವುದು ಕೂಡ ಬಹಳ ಮುಖ್ಯ. ಹಾಗೆಯೇ, ಸಾವಯವ ಹುಲ್ಲಿನ ಅಥವಾ ಬೆಳೆ ರವದಿಗಳ ಹಾಸಿಗೆ ಒದಗಿಸುವುದು ಸೂಕ್ತ. ಜಾನುವಾರುಗಳ ವಯಸ್ಸಿಗೆ ತಕ್ಕಂತೆ ಅವುಗಳನ್ನು ಚೆನ್ನಾಗಿ ಪಾಲನೆ ಪೋಷಣೆ ಮಾಡಬೇಕು. ಕೋಳಿ ಮತ್ತು ಮೊಲಗಳನ್ನು ಸಾಕುವಾಗ ನೆನಪಿಡಬೇಕಾದದ್ದೇನೆಂದರೆ, ಇವುಗಳನ್ನು ಪಂಜರದಲ್ಲಿ ಸಾಕಬಾರದು ಹಾಗೂ ಇವುಗಳಿಗೆ ಸಾಮಾನ್ಯ ಪರಿಸರವನ್ನು ಒದಗಿಸಬೇಕು.
ಪಶುಸಂಗೋಪನೆಗೆ ಕೃಷಿ ಕ್ಷೇತ್ರ ಅವಶ್ಯಕವಾಗಿದೆ. ಸಾವಯವ ಪಶುಸಂಗೋಪನೆಯಲ್ಲಿ, ಸಾವಯವ ಕ್ಷೇತ್ರದಿಂದ ಉತ್ಪಾದಿಸಿದ ಮೇವು ಹಾಗೂ ಪಶು ಆಹಾರವನ್ನು ಪೂರೈಸುವುದು ಅತ್ಯಗತ್ಯ. ಸಾಧ್ಯವಾದಷ್ಟು, ಪಶುಗಳಿಗೆ ಬೇಕಾಗುವ 80 ಪ್ರತಿಶತದಷ್ಟು ಮೇವು ತಮ್ಮ ಸಾವಯವ ಕ್ಷೇತ್ರದಲ್ಲಿಯೇ ಉತ್ಪಾದಿಸಿದ್ದಾಗಿರಬೇಕು. ಅದೇ ರೀತಿ, ಜಾನುವಾರುಗಳ ಚಟುವಟಿಕೆ ಹಾಗೂ ಬೇಡಿಕೆಗನುಗುಣವಾಗಿ ಪೌಷ್ಟಿಕ ಹಾಗೂ ಸಮತೋಲನ ಆಹಾರವನ್ನು ಕೊಡಬೇಕಾಗುತ್ತದೆ. ನೈಸರ್ಗಿಕ ಪ್ರಕೋಪಗಳು, ಉದಾಹರಣೆಗೆ ಬರಗಾಲ, ನೆರೆಹಾವಳಿ ಇತ್ಯಾದಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬೇರೆ ಕ್ಷೇತ್ರಗಳಿಂದ ಮೇವು ಹಾಗೂ ಪಶು ಆಹಾರ ತಂದು ಹಾಕಲು ಅವಕಾಶವಿರುತ್ತದೆ.
ಇನ್ನು, ಪಶು ಆಹಾರ ಪೂರೈಕೆಯಲ್ಲಿ ಈ ಕೆಳಕಂಡ ವಸ್ತುಗಳನ್ನು ಹಾಗೂ ಅಂಶಗಳನ್ನು ಬಳಸುವುದು ಸೂಕ್ತವಲ್ಲ. ಜಾನುವಾರುಗಳ ಕೃತಕ ಬೆಳವಣಿಗೆ ವೃದ್ಧಿಸುವ ಪ್ರಚೋದಕಗಳು, ಕೃತಕ ಹಸಿವು ಹೆಚ್ಚಿಸುವ ಪ್ರಚೋದಕಗಳು, ರಾಸಾಯನಿಕ ಸಂಗ್ರಹಣೆಗಾಗಿ ಬಳಸುವ ವಸ್ತುಗಳು, ಯೂರಿಯಾ, ಪ್ರಾಣಿಜನ್ಯ ವಸ್ತುಗಳು, ರಾಸಾಯನಿಕ ವಿಧಾನದಿಂದ ಎಣ್ಣೆ ಸಂಸ್ಕರಿಸಿದ ಹಿಂಡಿ, ಜೈವಿಕ ತಂತ್ರಜ್ಞಾನದಿಂದ ಉತ್ಪಾದಿಸಿದ ಆಹಾರ ಪದಾರ್ಥಗಳು, ನೈಸರ್ಗಿಕವಲ್ಲದ ಜೀವಸತ್ವಗಳು, ಖನಿಜಾಂಶಗಳು ಹಾಗೂ ಅಮೈನೋ ಆಮ್ಲಗಳನ್ನು ಸಾಧ್ಯವಾದಷ್ಟು ಕೈ ಬಿಡುವುದು ಸೂಕ್ತ.
ಈಗಿನ ಕಲುಷಿತ ಪರಿಸರದಲ್ಲಿ, ಬೆಳೆಗಳಿಗೆ ಸಾವಯವ ಗೊಬ್ಬರವನ್ನು ಬಳಸಲು ರೈತರನ್ನು ಪ್ರೋತ್ಸಾಹಿಸುವುದೂ ಕೂಡ ಮುಖ್ಯವಾಗುತ್ತದೆ. ಸಾವಯವ ಗೊಬ್ಬರವನ್ನು ತಯಾರಿಸಲು ಮುಖ್ಯ ಪದಾರ್ಥಗಳೆಂದರೆ, ಹಸುವಿನ ಸಗಣಿ, ಹಸುವಿನ ಮೂತ್ರ, ಮೇಕೆ ಸಗಣಿ ಮತ್ತು ಹಸಿರು ಗೊಬ್ಬರ. ಕೃಷಿ ಕ್ಷೇತ್ರದಲ್ಲಿ ಹಸುವಿನ ಮೂತ್ರ, ಹಾಲು, ಮೊಸರು, ತುಪ್ಪ ಮತ್ತು ಮೆಣಸಿನಕಾಯಿಯಿಂದ ತಯಾರಿಸಿದ ಅಗ್ನಿಯಾಸ್ತ್ರ ಒಳಗೊಂಡಿರುವ ಸಾಂಪ್ರದಾಯಿಕ ಗೊಬ್ಬರಗಳನ್ನು ಬಳಸಬೇಕಾಗುತ್ತದೆ. ಹಾಗೇ, ಕೃಷಿ ಕ್ಷೇತ್ರದಲ್ಲಿ ಹಸಿರು ಗೊಬ್ಬರವನ್ನು ಹಾಕಬೇಕು. ಇದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ನಂತರ ನಾಲ್ಕು ಐದು ಆಡುಗಳನ್ನು ಎರಡು, ಮೂರು ದಿನಗಳವರೆಗೆ ನಿಮ್ಮ ಹೊಲದಲ್ಲಿ ಸುತ್ತಾಡಲು ಅನುಮತಿ ನೀಡಬೇಕು. ಇದಕ್ಕೆ ಕಾರಣವೆಂದರೆ, ಹಸು ಮೇಕೆ ಆಡುಗಳ ಮಲವಿಸರ್ಜನೆಯು ಕೃಷಿಗೆ ಉತ್ತಮ ಗೊಬ್ಬರವಾಗಿರುತ್ತದೆ. ಇದಕ್ಕಾಗಿಯೇ, ಸಾವಯವ ಕೃಷಿಯಲ್ಲಿ ದೇಸಿ ಜಾನುವಾರಗಳ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಲ್ಲದೆ ಸಾವಯವ ಕೃಷಿ ಅಸಾಧ್ಯ ಎಂದೇ ಹೇಳಬಹುದು. ಜಾನುವಾರುಗಳ ಮೂಲಕ ಸೆಗಣಿ, ಗೋಮೂತ್ರಗಳು ಸಾವಯವ ಕೃಷಿಗೆ ಸಹಾಯಕವಾಗಿವೆ. ಬೆಳೆ ಕಟಾವಿನ ನಂತರ, ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡನ್ನು ಬಿಡುವುದರಿಂದ, ಕುರಿ, ಮೇಕೆಗಳ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.
ಹಾಗಾಗಿಯೇ, ಸಾವಯವ ಕೃಷಿಗೆ ಪೂರಕವಾಗಿ ರೈತರು ಕೃಷಿ ಉಪ ಕಸಬುಗಳಾದ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುವುದು ಲಾಭದಾಯಕ. ಅದೇ ರೀತಿ, ಜಾನುವಾರುಗಳ ಗೊಬ್ಬರಕ್ಕೆ ಭಾರಿ ಬೇಡಿಕೆಯೂ ಇದೆ. ಇನ್ನು, ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರ ಸಾವಯವ ಕೃಷಿ ವಿಶ್ವವಿದ್ಯಾಲಯಗಳನ್ನು ಹೆಚ್ಚೆಚ್ಚು ಸ್ಥಾಪಿಸಿದಲ್ಲಿ, ಜಾನುವಾರುಗಳ ಹೈನೋದ್ಯಮ, ಕುರಿ-ಮೇಕೆ ಸಾಕಾಣಿಕೆ ಸೇರಿದಂತೆ, ಕೃಷಿ ಪೂರಕ ಉಪ ಕಸಬುಗಳು ರೈತರ ಜೀವನ ರೂಪಿಸುವಲ್ಲಿ ಆರ್ಥಿಕ ಸಹಾಯ ನೀಡಲಿವೆ. ಇನ್ನು, ಕೇವಲ ಮಣ್ಣು ಹಾಗೂ ನೀರಿದ್ದರೆ ಸಾವಯವ ಕೃಷಿ ಅಸಾಧ್ಯ. ಹಾಗಾಗಿ ಪಾರಂಪರಿಕ ಕೃಷಿ ಪದ್ಧತಿಗೆ ಪೂರಕವಾದ ಹೈನು, ಕುರಿ-ಮೇಕೆ, ಕೋಳಿ ಸಾಕಾಣಿಕೆಯಂಥ ಕೃಷಿ ಉಪಕಸಬುಗಳ ಬಗ್ಗೆ ಹೆಚ್ಚು ಅರಿವು ಹಾಗೂ ಪ್ರೋತ್ಸಾಹದ ಅಗತ್ಯವಿದೆ.
ಇದನ್ನು ಓದಿ… ಸಾವಯವ ಕೃಷಿ ಪ್ರೋತ್ಸಾಹಕ್ಕೆ ಸರ್ಕಾರದ ಯೋಜನೆಗಳು ! Government Schemes To Promote Organic Farming
ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ