ಸಹಜ ಕೃಷಿಯ ಆಧಾರಸ್ತಂಭಗಳು: Pillars of Organic Farming
Pillars of Organic Farming- ಸಹಜ ಕೃಷಿ ವಿಧಾನ ದೇಶದ ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿದ್ದರೂ, ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ನಮ್ಮ ಕರ್ನಾಟಕದಲ್ಲಿಯೇ ಲಕ್ಷಗಟ್ಟಲೆ ರೈತರು ಶೂನ್ಯ ಬಂಡವಾಳ ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದರೆ. ಮಹಾರಾಷ್ಟ್ರದ ಕೃಷಿ ತಜ್ಞ ಸುಭಾಷ್ ಪಾಲೇಕರ್ ಅವರು ಈ ಶೂನ್ಯ ಬಂಡವಾಳ ಸಹಜ ಕೃಷಿಯ ಪರಿಕಲ್ಪನೆಯನ್ನು ಜಾರಿಗೆ ತಂದರು. ಸಹಜ ಕೃಷಿಯಲ್ಲಿ ರಾಸಾಯನಿಕ ಬಳಕೆ ಇರುವುದಿಲ್ಲ, ಕೈಯಿಂದ ಬಂಡವಾಳ ಹಾಕುವ ಅಗತ್ಯವಿಲ್ಲ, ಶ್ರಮವೂ ಬಹಳ ಕಡಿಮೆ. ಸಹಜ ಕೃಷಿಯ ನಾಲ್ಕು ಆಧಾರಸ್ತಂಭಗಳೇ ಜೀವಾಮೃತ, ಬೀಜಾಮೃತ, ಹೊದಿಕೆ ಮತ್ತು ಆರ್ದ್ರತೆ..
ಜೀವಾಮೃತ
ಜೀವಾಮೃತ ಎಂದರೆ ಬೆಳೆಗಳಿಗೆ ಪೋಷಕಾಂಶ ಒದಗಿಸುವ ಮೂಲಭೂತ ಕ್ರಮವಾಗಿದೆ. ಇದು ಸಹಜ ಕೃಷಿಯ ಪ್ರಮುಖ ಪದ್ಧತಿ. ಇದಕ್ಕೆ ಹೆಚ್ಚಿಗೆ ಖರ್ಚು ಮಾಡುವ ಅಗತ್ಯವಿಲ್ಲ. ಹಸುವಿನ ಸೆಗಣಿ, ಮೂತ್ರ, ಬೆಲ್ಲ, ದ್ವಿದಳಧಾನ್ಯದ ಹಿಟ್ಟು, ಒಂದು ಹಿಡಿ ಮಣ್ಣು, ಇಷ್ಟನ್ನು ನೀರಿನಲ್ಲಿ ಕಲಸಿ, 48 ಗಂಟೆಗಳ ಕಾಲ ಹುದುಗಲು ಬಿಡಬೇಕು. ಈ ದ್ರಾವಣವನ್ನೇ ಜೀವಾಮೃತ ಎಂದು ಕರೆಯಲಾಗುತ್ತದೆ. ಒಂದು ಎಕರೆ ಕೃಷಿ ಭೂಮಿಗೆ 200 ಲೀಟರ್ನ್ನಷ್ಟು ಜೀವಾಮೃತ ಅಗತ್ಯವಿರುತ್ತದೆ. ರಾಸಾಯನಿಕ ಔಷಧಗಳ ಬದಲು ನೈಸರ್ಗಿಕವಾಗಿ ಸಿದ್ದಪಡಿಸಿದ ಈ ದ್ರಾವಣವನ್ನು ಬೆಳೆಗೆ ಸಿಂಪಡಣೆ ಮಾಡುವ ಮೂಲಕ ಸಸ್ಯಗಳಿಗೆ ಪೋಷಕಾಂಶ ಸಿಗುವಂತೆ ಮಾಡಬಹುದು, ಜೊತೆಗೆ ಬ್ಯಾಕ್ಟೀರಿಯಾ, ಶಿಲೀಂದ್ರಗಳಿಂದ ಬರುವ ರೋಗಗಳ ನಿಯಂತ್ರಣವನ್ನೂ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗುತ್ತದೆ.
ಬೀಜಾಮೃತ
ಬೀಜಾಮೃತ ಎನ್ನುವುದು ಬೀಜಕ್ಕೆ ಉಪಚಾರ ಮಾಡುವ ಕ್ರಮ. ನಾಟಿ ಮಾಡಿದ ಬೀಜಗಳನ್ನು ಹುಳು ತಿನ್ನದಂತೆ ಕಾಪಾಡುವ ಪರಿಣಾಮಕಾರಿ ವಿಧಾನವೇ ಇದು. ಮಾನ್ಸೂನ್ ನಂತರದ ದಿನಗಳಲ್ಲಿ ಎಳೆಯ ಬೇರು ಮಣ್ಣು ಮತ್ತು ಬೀಜಗಳಿಂದ ಹಾಗೂ ಫಂಗಸ್ ಹರಡುವ ರೋಗಗಳಿಂದ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬೀಜಾಮೃತ ದ್ರಾವಣವು ಗಿಡಗಳಿಗೆ ಉಂಟಾಗುವ ಇಂತಹ ರೋಗಗಳನ್ನು ತಡೆದು, ಬೇರುಗಳನ್ನು ಸದೃಢಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತದೆ. ನೈಸರ್ಗಿಕವಾಗಿ ಸಿಗುವ ಅತ್ಯಂತ ಶಕ್ತಿಯುತ ಶಿಲೀಂದ್ರನಾಶಕವಾದ ಹಸುವಿನ ಸಗಣಿಯ ಜೊತೆಗೆ ಗೋಮೂತ್ರ, ಲಿಂಬು, ಸುಣ್ಣ, ಹಿಡಿ ಮಣ್ಣನ್ನು ಮಿಶ್ರಣ ಮಾಡಿ ಇದನ್ನು ತಯಾರಿಸಲಾಗುತ್ತದೆ. ನಾಟಿ ಮಾಡಬೇಕಾದ ಬೀಜಕ್ಕೆ ಈ ಮಿಶ್ರಣವನ್ನು ಹರಡಿ, ಚೆನ್ನಾಗಿ ಒಣಗಲು ಬಿಟ್ಟು ನಂತರ ಭೂಮಿಯಲ್ಲಿ ನೆಟ್ಟರೆ, ಬೆಳೆ ಸದೃಢವಾಗಿ ಸಮೃದ್ಧವಾಗಿರುತ್ತದೆ.
ಹೊದಿಕೆ
ಹೊದಿಕೆ ಎನ್ನುವುದು, ಕಳೆ ನಿಯಂತ್ರಣ ಮತ್ತು ಮಣ್ಣಿನ ಪೋಷಕಾಂಶ ರಕ್ಷಣೆಗೆ ಬಹಳ ಅತ್ಯಗತ್ಯ. ಬಿತ್ತನೆ ಅಥವಾ ನಾಟಿ ಮುಗಿದ ನಂತರ ಬೆಳೆಗಳ ಮಧ್ಯೆ ಮೂರು ವಿಧಗಳಲ್ಲಿ ಹೊದಿಕೆ ಮಾಡಬೇಕಾಗುತ್ತದೆ. ಒಂದು ಮಣ್ಣಿನ ಹೊದಿಕೆಯಾದರೆ, ಇನ್ನೊಂದು ಒಣ ಹುಲ್ಲುಗಳು ಅಥವಾ ತ್ಯಾಜ್ಯ ಪದಾರ್ಥಗಳ ಹೊದಿಕೆ ಹಾಗೂ ಮೂರನೆಯದು ಜೈವಿಕ ಹೊದಿಕೆ. ಈ ಹೊದಿಕೆಗಳ ಮಹತ್ವ ಏನೆಂದರೆ, ಇದರಿಂದ ಬೆಳೆಗಳಿಗೆ ಬಲ ಸಿಗುತ್ತದೆ ಮತ್ತು ತೇವಾಂಶ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಸೂರ್ಯನ ತೀಕ್ಷ್ಣ ಕಿರಣಗಳು ನೆಲವನ್ನು ಮುಟ್ಟಲು ಸಾಧ್ಯವಾಗದ ಕಾರಣ ನೆಲದ ಪೋಷಕಾಂಶಗಳು ವ್ಯರ್ಥವಾಗುವುದಿಲ್ಲ ಹಾಗೂ ಕಳೆ ಬೆಳೆಯುವುದಿಲ್ಲ. ಭೂಮಿಯಲ್ಲಿರುವ ಉಪಯುಕ್ತ ಸೂಕ್ಷ್ಮಜೀವಿಗಳಿಗೂ ಇದು ಪೂರಕವಾಗಿರುತ್ತದೆ.
ಆರ್ದ್ರತೆ ಅಥವಾ ಪಸೆ:
ಗಿಡದ ಬೆಳವಣಿಗೆಗೆ ನೀರು ಅತ್ಯಗತ್ಯ. ಸಸ್ಯಗಳ ಬೇರುಗಳಿಗೂ ನೀರು ಬೇಕು ಬೇಕು, ಆದರೆ ಅದು ಒಂದು ಹದದಲ್ಲಿರಬೇಕು. ನೀರು ಜಾಸ್ತಿಯಾದರೆ ಬೇರು ಕೊಳೆಯುವ ರೋಗ ಬರುವ ಸಾಧ್ಯತೆ ಹೆಚ್ಚು. ಈ ಸಹಜ ಕೃಷಿಯಲ್ಲಿ ನೀರಿನ ನಿರ್ವಹಣೆಗೆ ಜಾಣತನ ಬೇಕಾಗುತ್ತದೆ, ಕೇವಲ ಮಣ್ಣಿನ ಸ್ಪರ್ಶ ಮತ್ತು ವಾಸನೆಯಿಂದಲೇ ಪಸೆಯ ಹದ ಅರಿಯುವ ಅನುಭವವೂ ಬೇಕಾಗುತ್ತದೆ. ಮುಚ್ಚಿಗೆ ವ್ಯವಸ್ಥೆ ಸಮರ್ಪಕವಾಗಿದ್ದರೆ ಬೇರಿನ ಸುತ್ತಲಿನ ಆರ್ದ್ರತೆ ಸುಲಭಕ್ಕೆ ಹೋಗುವುದಿಲ್ಲ. ಮಳೆನೀರು ಸಹ ಬೇಗನೇ ಆವಿಯಾಗಲು ಅವಕಾಶ ಸಿಗದೇ, ಭೂಮಿಯ ವಾತಾವರಣದಲ್ಲಿ ತೇವಾಂಶ ಹರಡಿ, ಗಿಡಗಳನ್ನು ಪೋಷಿಸುತ್ತದೆ.
ಒಟ್ಟಾರೆಯಾಗಿ, ಸಹಜ ಕೃಷಿ ಪದ್ಧತಿಯಲ್ಲಿ ಜೈವಿಕ, ಸಾವಯವ ಅಂಶಗಳ ಬಳಕೆ ಇರುತ್ತದೆಯೇ ಹೊರತು, ರಾಸಾಯನಿಕಗಳ ಒಂದಂಶದ ಪ್ರಯೋಗವೂ ಇರುವುದಿಲ್ಲ. ಹಾಗೆಯೇ ಒಂದು ಎಕರೆ ಜಮೀನಿನಲ್ಲಿ ಮಾಡುವ ಶೂನ್ಯ ಬಂಡವಾಳ ಸಹಜ ಕೃಷಿಯಿಂದ ವರ್ಷಕ್ಕೆ ಸರಿಸುಮಾರು ₹ 3-6 ಲಕ್ಷ ಆದಾಯ ಗಳಿಸಬಹುದು ಎಂಬುದು ಸುಭಾಷ್ ಪಾಲೇಕರ್ ಅವರ ಲೆಕ್ಕಾಚಾರ ವಾಗಿದೆ.
ಇದನ್ನು ಓದಿ… ಕೃಷಿ ವಿಧಾನಗಳು: Farming methods
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ