ಸಹಜ ಕೃಷಿಯಲ್ಲಿ ಕೀಟಗಳ ಪಾತ್ರ ! Role of Insects in Organic Farming
ಕೃಷಿ ಮಾಡುವ ಸಂದರ್ಭದಲ್ಲಿ ರೈತರಿಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಕೃಷಿಕರಿಗೆ ಎರಡನೇ ದೊಡ್ಡ ಶತ್ರು ಎಂದರೆ ಬೆಳೆಗಳಿಗೆ ತಗಲುವ ಕೀಟಗಳು. ಈ ಕೀಟಗಳ ನಿರ್ವಹಣೆಗೆ, ಸಹಜ ಕೃಷಿಯಲ್ಲಿ ಬೇವಿನಂತಹ ಗಿಡಗಳಿಂದ ತೆಗೆದ ಕಷಾಯವನ್ನು ಸಿಂಪರಣೆ ಮಾಡಲಾಗುತ್ತದೆ. ಈ ವಿಧಾನ ಸ್ವಲ್ಪ ತಡವಾದರೂ, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ, ಈಗಿನ ಸಂದರ್ಭದಲ್ಲಿ ಕಾಯುವ ತಾಳ್ಮೆ ಯಾರಿಗೂ ಇಲ್ಲದಿರುವುದರಿಂದ, ರೈತರು ಕ್ಷಣದಲ್ಲಿ ಹುಳುಗಳ ನಾಶ ಮಾಡಲು ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ. ಇದರಿಂದ ಬೆಳೆಯಲ್ಲಿ ರಾಸಾಯನಿಕದ ಅಂಶ ತುಂಬಿಕೊಂಡು, ಸೇವಿಸುವವರ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹಾಗಾಗಿ, ಸಹಜ ಕೃಷಿಯಲ್ಲಿ ಸಾವಯವ ಔಷಧಗಳಿಂದಲೇ ಬೆಳೆಗಳಿಗೆ ತಗಲುವ ರೋಗ, ಕೀಟ ಬಾಧೆ ನಿಯಂತ್ರಣ ಮಾಡಲಾಗುತ್ತದೆ.
ಹೌದು, ಕೃಷಿಕರಿಗೆ ನೂರಾರು ಕೀಟಗಳು ಸತತವಾಗಿ ಕಾಟ ಕೊಡುತ್ತಲೇ ಇರುತ್ತವೆ. ಆದರೆ, ಪ್ರಕೃತಿಯಲ್ಲಿ ಕೃಷಿಕರ ಮಿತ್ರರಾಗಿ ಕೆಲಸ ಮಾಡುವ ಕೆಲವು ಕೀಟಗಳೂ ಇವೆ. ಪರಿಸರ ಸ್ನೇಹಿಯಾಗಿರುವ ಎರಡು ವಿಧದ ಕೀಟಗಳನ್ನು ನಾವು ಗುರುತಿಸಬಹುದು. ಕೆಲವು ಕೀಟಗಳು ಪರಭಕ್ಷಕಗಳಾಗಿದ್ದು, ಬೆಳೆಗಳನ್ನು ನಾಶ ಮಾಡುವ ಕೀಟಗಳನ್ನು ಕೊಂದು ತಿನ್ನುತ್ತವೆ. ಇನ್ನೂ ಹಲವು ಕೀಟಗಳು ರೈತರ ಕಣ್ಣಿಗೆ ಕಾಣಿಸದೇ ಮಣ್ಣಿನಲ್ಲೇ ಅಡಗಿ ಕುಳಿತು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಹೀಗಾಗಿ ಕೃಷಿ ಭೂಮಿಯಲ್ಲಿ, ರೈತ ಸ್ನೇಹಿಯಾದ ಎರೆ ಹುಳು, ಶಿವನ ಕುದುರೆ, ಗುಲಗಂಜಿ ಹುಳು, ಸಗಣಿ ಹುಳು ಮುಂತಾದ ಹಲವು ಕೀಟಗಳು ಇರಬೇಕಾಗುತ್ತದೆ.
ಈ ರೈತ ಮಿತ್ರ ಕೀಟಗಳು, ಪ್ರಕೃತಿಯೇ ರೈತರಿಗೆ ನೀಡಿರುವ ಬಹುದೊಡ್ಡ ವರದಾನವಾಗಿದೆ. ಪ್ರತಿ ಬಾರಿಯೂ ಕೀಟ ಬಾಧೆ ಕಾಣಿಸಿಕೊಂಡಾಗ ಸಾಮಾನ್ಯವಾಗಿ ರೈತರು ಮಾಡುವ ಕೆಲಸ ಎಂದರೆ ಬೆಳೆಗೆ ಕೀಟನಾಶಕ ಸಿಂಪಡಿಸುವುದು. ಇದು ವೇಗವಾಗಿ ಕೆಲಸ ಮಾಡಿದರೂ, ಕೀಟನಾಶಕದ ಪ್ರಭಾವ ಕಡಿಮೆಯಾದಂತೆ ಮತ್ತೆ ಬೇರೆ ಕೀಟಗಳು ಅಥವಾ ಮೊದಲಿದ್ದ ಪ್ರಜಾತಿಯ ಬೆಳೆ ಭಕ್ಷಕ ಕೀಟಗಳೇ ಮತ್ತೆ ಬೆಳೆಯ ಮೇಲೆ ಹಾವಳಿ ಮಾಡುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ರೈತರು ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕಾಗುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ, ಮಾರುಕಟ್ಟೆಯಲ್ಲಿ ಯಾವುದೇ ಕೀಟನಾಶಕವೂ ಕಡಿಮೆ ಬೆಲೆಯಲ್ಲಿ ಸಿಗುವುದಿಲ್ಲ. ಹೀಗಾಗಿ, ಹಾನಿಕಾರಕ ಕೀಟಗಳನ್ನು ನೈಸರ್ಗಿಕವಾಗಿಯೇ ನಿಯಂತ್ರಿಸಲು ಈ ಪರಭಕ್ಷಕ ಕೀಟಗಳು ರೈತರಿಗೆ ನೆರವಾಗುತ್ತವೆ. ಇನ್ನೊಂದೆಡೆ ಮಣ್ಣಿನ ಒಳಗಿರುವ ಹುಳುಗಳು ಮಣ್ಣಿನ ಫಲವತ್ತತೆ ಹೆಚ್ಚಿಸಿ, ಉತ್ತಮ ಇಳುವರಿ ಪಡೆಯಲು ನೆರವಾಗುತ್ತವೆ. ಈ ಮೂಲಕ ಸಹಜ ಕೃಷಿಯಲ್ಲಿ ರೈತರಿಗೆ ನೆರವಾಗುವ ಕೀಟಗಳ ಬಗ್ಗೆ ತಿಳಿದುಕೊಳ್ಳೋಣ.
ಪ್ರಕೃತಿಯಲ್ಲಿ ಪ್ರತೀಕ್ಷಣವೂ ನಿರಂತರವಾಗಿ ವಿಭಿನ್ನವಾದ ಅಸಂಖ್ಯಾತ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಪ್ರಕೃತಿ ಮಾತೆ ಸೃಷ್ಟಿಸಿದ್ದ ಸಮತೋಲನವನ್ನು, ಬುದ್ಧಿವಂತ ಎನಿಸಿಕೊಂಡ ಮನುಷ್ಯ ಜೀವಿಗಳು ಹಾಳುಗೆಡವುತ್ತಾ ಬಂದಿದ್ದಾರೆ. ಆದರೆ, ಪ್ರಕೃತಿ ಇದನ್ನೆಲ್ಲಾ ಸುಮ್ಮನೆ ನೋಡುತ್ತಾ ಕುಳಿತುಕೊಂಡಿಲ್ಲ. ತನ್ನ ಮಡಿಲಲ್ಲಿ ನಿತ್ಯವೂ ಹುಟ್ಟಿ-ಸಾಯುವ ಸಣ್ಣ ಪುಟ್ಟ ಜೀವಿಗಳನ್ನು ಬಳಸಿಕೊಂಡು, ಮನುಷ್ಯನು ಹಾಳುಗೆಡುವುತ್ತಿರುವ ಎಲ್ಲಾ ವ್ಯವಸ್ಥೆಗಳನ್ನೂ ಸರಿಪಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಉದಾಹರಣೆಗೆ, ಆಹಾರ ತ್ಯಾಜ್ಯವನ್ನೇ ತೆಗೆದುಕೊಂಡರೆ, ಅದು ಎಂದಿಗೂ ನಿರುಪಯುಕ್ತವಾಗುವುದೇ ಇಲ್ಲ. ನಾವು ತಿಂದು, ತ್ಯಾಜ್ಯವೆಂದು ಬಿಸಾಡಿದ ಅಳಿದುಳಿದ ಆಹಾರ, ಉಳಿದ ಕೆಲವು ಜೀವಿಗಳಿಗೆ ಆಹಾರವಾಗುತ್ತದೆ. ನೆಲಕ್ಕೆ ಬಿದ್ದ ಒಂದು ಬ್ರೆಡ್ಡಿನ ಚೂರು ಕೂಡ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳ ಹೊಟ್ಟೆ ತುಂಬಿಸುತ್ತದೆ. ಇಂತಹ ತ್ಯಾಜ್ಯವನ್ನು ತಿಂದು ಬದುಕು ಕಟ್ಟಿಕೊಳ್ಳುವ ಜೀವಿಗಳು ಕೃಷಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಅಂತಹ ಕೆಲವು ಹುಳು, ಕೀಟಗಳ ಪರಿಚಯ ಇಲ್ಲಿದೆ.
- ಸಗಣಿಯನ್ನೇ ತಿಂದುಂಡು, ಅದರೊಳಗೆ ಜೀವಿಸುವ ಹುಳುವೇ ಸಗಣಿ ಹುಳು. ಸಗಣಿಯನ್ನು ಉಂಡೆಯನ್ನಾಗಿ ಮಾಡಿ ಉರುಳಿಸಿಕೊಂಡು ಹೋಗುವ ಈ ಹುಳುವನ್ನು ಒಂದು ನೈಸರ್ಗಿಕ ಗೊಬ್ಬರದ ಉತ್ಪಾದಕ ಎಂದು ವರ್ಣಿಸಬಹುದು. ಅದರಲ್ಲೂ, ಜಮೀನಿಗೆ ಸಗಣಿ ಗೊಬ್ಬರವನ್ನು ಹಾಕಿದಾಗ ಅದರಲ್ಲಿ ಈ ಸಗಣಿ ಹುಳುಗಳಿದ್ದರೆ ನಿಮ್ಮ ಭೂಮಿಯು ಬಹಳ ಫಲವತ್ತಾಗಲಿದೆ ಎಂದರ್ಥ. ಸಗಣಿಯ ಜೊತೆ ಭೂಮಿಯ ಒಳಗೆ ಸೇರಿಕೊಳ್ಳುವ ಈ ಹುಳುಗಳು ಸಗಣಿಯನ್ನೇ ಸೇವಿಸಿ, ಅದನ್ನೇ ವಿಸರ್ಜಿಸುವುದರಿಂದ ಫಲವತ್ತಾದ ಗೊಬ್ಬರ ಉತ್ಪಾದನೆಯಾಗುತ್ತದೆ. ಇದು ಬೆಳೆಗಳಿಗೆ ಅತೀ ಅಗತ್ಯವಾಗಿರುವ ಹಲವಾರು ಪೋಷಕಾಂಶಗಳ ಆಗರವಾಗಿದೆ.
- ರೈತ ಮಿತ್ರ ಎರೆ ಹುಳುಗಳನ್ನು ಪರಿಚಯಿಸುವ ಅಗತ್ಯವಿಲ್ಲ. ‘ರೈತ ಮಿತ್ರ’ ಎಂಬ ಖ್ಯಾತಿಗೆ ಪಾತ್ರವಾಗಿರುವ ಎರೆಹುಳು ರೈತರಿಗೆ ದೊಡ್ಡ ವರ. ಮಳೆ ಹುಳು ಎಂದೂ ಕರೆಯಲ್ಪಡುವ ಎರೆ ಹುಳುಗಳು ಉತ್ಪಾದಿಸುವಷ್ಟು ಪ್ರಮಾಣದ ಗೊಬ್ಬರವನ್ನು, ಪ್ರಕೃತಿಯಲ್ಲಿರುವ ಮತ್ತಾವ ಹುಳು ಅಥವಾ ಕೀಟ ಕೂಡ ಉತ್ಪಾದಿಸಲು ಸಾಧ್ಯವಿಲ್ಲ. ಬಿಡುವಿರದೆ ಸತತವಾಗಿ ಕಾರ್ಯನಿರತರಾಗಿರುವ ಈ ಹುಳುಗಳು, ಕೇವಲ ಒಂದು ದಿನಕ್ಕೆ ತಮ್ಮ ದೇಹ ತೂಕದ ಒಂದೂವರೆ ಪಟ್ಟು ಮಣ್ಣನ್ನು ಹೊರಟತೆಗೆದು ಗೊಬ್ಬರವಾಗಿ ಪರಿವರ್ತಿಸುತ್ತವೆ. ಉದಾಹರಣೆಗೆ, ಒಂದು ಎಕರೆ ಜಮೀನಿನಲ್ಲಿ 2 ಲಕ್ಷ ಎರೆಹುಳುಗಳಿದ್ದರೆ, ಒಂದು ದಿನಕ್ಕೆ 2 ಟನ್ ಗೊಬ್ಬರವನ್ನು ಉತ್ಪಾದಿಸುತ್ತವೆ. ಮಣ್ಣನ್ನು ಸೇವಿಸಿ ಫಲವತ್ತಾದ ಮಲ ವಿಸರ್ಜನೆ ಮಾಡುವ ಈ ಹುಳು ಒಂದು ನಿಶಾಚರಿ ಜೀವಿ. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಈ ಹುಳು ಭೂಮಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಒಂದೇ ರಾತ್ರಿಯಲ್ಲಿ ಆರಕ್ಕೂ ಹೆಚ್ಚು ಬಾರಿ ಭೂಮಿಯ ಮೇಲ್ಪದರಕ್ಕೆ ಬಂದು ಹೋಗುತ್ತದೆ.
- ರೈತ ಸ್ನೇಹಿಯಾದ ಇನ್ನೊಂದು ಕೀಟ ಶಿವನ ಕುದುರೆಯನ್ನು ‘ನೇಗಿಲ ಯೋಗಿ’ ಎಂದು ಕರೆಯುತ್ತಾರೆ. ಹಿಂದೆಲ್ಲಾ ಕೃಷಿ ಭೂಮಿಯಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಈ ಹುಳು ಈಗ ಅತ್ಯಂತ ಅಪರೂಪವಾಗಿ ಕಾಣಿಸುತ್ತದೆ. ರೈತರು ಸಹಜ ಕೃಷಿ ಪದ್ಧತಿಯನ್ನು ಬಿಟ್ಟು ರಾಸಾಯನಿಕ ಹಾಗೂ ವಿಷಕಾರಿ ಕೀಟನಾಶಕಗಳನ್ನು ಬೆಳೆಗೆ ಸಿಂಪಡಿಸಲು ಆರಂಭಿಸಿದ ನಂತರ ಈ ಹುಳುಗಳ ಸಂಖ್ಯೆ ಕಡಿಮೆಯಾಗಿದೆ. ಬೆಳೆಯ ಎಲೆ, ಕಾಂಡದ ಮೇಲೆ ಕಾಣಸಿಗುವ ಶಿವನ ಕುದುರೆ ಕೀಟ, ತಿಗಣೆ, ಕಪ್ಪು ಮತ್ತು ಬಿಳಿ ನುಸಿ (ಸೀಡಿ) ಹುಳುಗಳನ್ನು ತಿನ್ನುವ ಮೂಲಕ ಬೆಳೆ ಸೊರಗುವುದನ್ನು ತಪ್ಪಿಸುತ್ತದೆ. ಜೊತೆಗೆ, ಬೆಳೆಗೆ ಹಾನಿಯುಂಟು ಮಾಡುವ ಹಲವಾರು ಸಣ್ಣ ಪುಟ್ಟ ಕೀಟಗಳನ್ನೂ ಹಸಿರು ಬಣ್ಣದ ಶಿವನಕುದುರೆ ತಿನ್ನುತ್ತದೆ.
- ರೈತ ಮಿತ್ರರ ಸಾಲಿಗೆ ಸೇರಿಕೊಳ್ಳುವ ಇನ್ನೊಂದು ಕೀಟ ಗುಲಗಂಜಿ ಹುಳು : ಕೆಂಪಗೆ ಮಿರಿ ಮಿರಿ ಮಿನುಗುವ ಚಿಪ್ಪನ್ನು ಮೈಮೇಲೆ ಹೊದ್ದು ಗಿಡದಿಂದ ಗಿಡಕ್ಕೆ ಹಾರುತ್ತಾ ಇರುವ ಗುಲಗಂಜಿ ಹುಳು, ಕಾಂಡ ಕೊರೆಯುವ ಸಣ್ಣ ಹುಳುಗಳು ಹಾಗೂ ಹಿಟ್ಟು ತಿಗಣೆ, ಕಪ್ಪು ಮತ್ತು ಬಿಳಿ ನುಸಿ ಹುಳುಗಳನ್ನು ನಾಶ ಮಾಡುತ್ತದೆ. ಆದರೆ, ಇತ್ತೀಚಿಗೆ ರಾಸಾಯನಿಕ ಹಾಗೂ ವಿಷಕಾರಿ ಕೀಟನಾಶಕಗಳ ಬಳಕೆಯಿಂದ ಈ ಹುಳುಗಳು ಕೂಡ ಮರೆಯಾಗಿವೆ.
ಹೀಗೆ, ಕೀಟನಾಶಕಗಳ ಬಳಕೆಯು ಹಾನಿಕಾರಕ ಕೀಟಗಳಿಗೆ ಮಾತ್ರವಲ್ಲದೇ, ಭೂಮಿಯಲ್ಲಿರುವ ರೈತ ಮಿತ್ರ ಹುಳುಗಳಿಗೂ ಮಾರಕವಾಗಿದೆ. ಹೀಗಾಗಿ, ಕೀಟನಾಶಕಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ. ಇದರಿಂದ, ಕೃಷಿಗೆ ಪೂರಕವಾಗಿರುವ ಹುಳು, ಕೀಟಗಳು ಹೊಲಗದ್ದೆಗಳಲ್ಲಿ ಹೆಚ್ಚಿ, ಬೆಳೆ ಭಕ್ಷಕ ಕೀಟಗಳನ್ನು ಸಂಹರಿಸಲು ಸಹಕರಿಯಾಗುತ್ತದೆ. ಜೊತೆಗೆ ಇದರಿಂದ ಪ್ರಾಕೃತಿಕ ಸಮತೋಲನವನ್ನೂ ಕಾಪಾಡಿದಂತಾಗುತ್ತದೆ.
ಇದನ್ನು ಒದಿ… ನೈಸರ್ಗಿಕ ಕೀಟನಾಶಕಗಳು ತಯಾರಿಸುವುದು ಹೇಗೆ ? ! How to make natural pesticides in kannada
ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.