ಅರಣ್ಯಕೃಷಿ ಎಂದರೇನು ..? What is agroforestry?
ರೈತರು ತಮ್ಮ ಜಮೀನಿನಲ್ಲಿ ಅಥವಾ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಹೊಲದ ಗಡಿಯನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಪ್ರೋತ್ಸಾಹ ಧನವನ್ನು ಕೂಡ ಪಡೆಯಬಹುದು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ), ಇದರ ಅಡಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸಲಾಗುವುದು. ಈ ಸಸಿಗಳನ್ನು ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಲೆಕ್ಕ ಹಾಕಿ ಜತೆಗೆ ಅರಣ್ಯ ಇಲಾಖೆಯಿಂದ 40 ಸಾವಿರ ರೂ. ವರೆಗೆ ಪ್ರೋತ್ಸಾಹಧನ ನೀಡಲಾಗುವುದು. ಸಾಮಾನ್ಯವಾಗಿ, ಒಬ್ಬ ರೈತ ಹೆಕ್ಟೇರ್ ಗೆ ಅಂದಾಜು 500 ಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಬಹುದು. ಹೌದು, ಹೊಲಗಳಲ್ಲಿ ಆಹಾರ, ವಾಣಿಜ್ಯ ಬೆಳೆ ಜತೆಯಲ್ಲಿಯೇ ಅರಣ್ಯ ಕೃಷಿ ಕೈಗೊಂಡರೆ ಸರ್ಕಾರವೇ ರೈತರಿಗೆ ಪ್ರೋತ್ಸಾಹದ ರೂಪದಲ್ಲಿ ಹಣ ಕೊಡುತ್ತದೆ. ಇಂತಹ ಅತ್ಯುತ್ತಮ ಯೋಜನೆಯನ್ನು ಅರಣ್ಯ ಇಲಾಖೆಯು ಜಾರಿಗೆ ತಂದಿರುವುದು ಶ್ಲಾಘನಾರ್ಹ.
ಇಂತಹ ಅರಣ್ಯ ಕೃಷಿಯನ್ನು ಅನುಸರಿಸಿ ಯಶಸ್ವಿಯಾದ ಒಬ್ಬ ರೈತನ ಸಾಹಸಗಾಥೆ ಇಲ್ಲಿದೆ ನೋಡಿ. ಹೌದು, ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ ತೆಗೆದು ಕೈತುಂಬಾ ಸಂಪಾದನೆ ಮಾಡುತ್ತಿರುವ ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮದ ಲಕ್ಷ್ಮೀಕಾಂತ ಹಿಬಾರಿಯವರ ಕೈಹಿಡಿದಿದ್ದು ಅರಣ್ಯ ಆಧಾರಿತ ಕೃಷಿ ಪದ್ಧತಿ. ಇವರು, ಹಿರಿಯರಿಂದ ಬಳುವಳಿಯಾಗಿ ಬಂದ ಮೂರುವರೆ ಎಕರೆ ಪಾಳುಬಿದ್ದ ಜಮೀನಿನಲ್ಲಿಯೇ ಬಂಗಾರದ ಬೆಳೆ ತೆಗೆದು ಮಾದರಿಯಾಗಿದ್ದಾರೆ.
ಕೃಷಿ ಜಮೀನು ಪ್ರಯೋಗಶಾಲೆ ಇದ್ದಂತೆ. ಜಮೀನಿನಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇದ್ದರೆ ಮಾತ್ರ ರೈತನಿಗೆ ನಿರಾಳ, ಇಲ್ಲವಾದರೆ ಕಷ್ಟ. ಹೀಗೆ ಜಮೀನಿನಲ್ಲಿ ಪ್ರಯೋಗಗಳನ್ನು ಮಾಡಿ, ಬಿಸಿಲೂರು ಕಲಬುರಗಿಯ ಹಾಗರಗಾ ರೈತ ಲಕ್ಷ್ಮೀಕಾಂತ ಅವರು ಅರಣ್ಯ ಕೃಷಿ ಮಾಡಿ ಗೆದ್ದಿದ್ದಾರೆ. ಇವರ ಕೃಷಿ ವಿವರ ಇಲ್ಲಿದೆ ನೋಡಿ.
ಮೂರುವರೆ ಎಕರೆ ಪಾಳುಬಿದ್ದ ಜಮೀನು ತಮ್ಮ ಪಾಲಿಗೆ ಬಂದಾಗ, ಪಾಲಿಗೆ ಬಂದದ್ದು ಪಂಚಾಮೃತವೆಂದು ಭಾವಿಸಿದ ಲಕ್ಷ್ಮೀಕಾಂತ ಹಿಬಾರೆಯವರು ಧೈರ್ಯಮಾಡಿ ಅರಣ್ಯ ಆಧಾರಿತ ಕೃಷಿಯತ್ತ ಒಲವು ತೋರಿದರು. ಹೇರಳವಾಗಿ ಸಾವಯವ ನಿಂಬೆ, ವಿವಿಧ ತರಕಾರಿಗಳನ್ನು ಬೆಳೆದು ಪ್ರಗತಿಪರ ರೈತರು ಹಾಗೂ ಕೃಷಿ ಅಧಿಕಾರಿಗಳು ಕೂಡ ಅವರ ಹೊಲದತ್ತ ಹಾಯುವಂತೆ ಮಾಡಿದ್ದಾರೆ.
ಇಂದಿನ ಯುವಪೀಳಿಗೆ ಕೃಷಿ ಜೀವನದಿಂದ ವಿಮುಖವಾಗಿ ನಗರ ಜೀವನಕ್ಕೆ ಮುಖ ಮಾಡುವುದನ್ನು ನಾವು ನೋಡಿಯೇ ಇದ್ದೇವೆ. ಆದರೆ ಲಕ್ಷ್ಮೀಕಾಂತ ಅವರು, ಭೂತಾಯಿಯನ್ನು ನಂಬಿದರೆ ಎಂದೂ ಮೋಸವಾಗುವುದಿಲ್ಲ ಎಂಬ ಗಟ್ಟಿ ನಿರ್ಧಾರದಿಂದಾಗಿ ಸಹಜಕೃಷಿಯತ್ತ ಒಲವು ತೋರಿ ಯಶಸ್ವಿಯಾಗಿದ್ದಾರೆ. ಓದಿದ್ದು ಕೇವಲ ಎಸ್.ಎಸ್.ಎಲ್.ಸಿ, ಆದರೆ ಅವರಲ್ಲಿ ಅಪಾರ ಪ್ರಮಾಣದ ಪಾಂಡಿತ್ಯ ತುಂಬಿದೆ. ಇವರ ಜೊತೆ ಒಮ್ಮೆ ಮಾತಿಗಿಳಿದು ನೋಡಿ, ಸಾವಯವ ಕೃಷಿ, ಮಿಶ್ರ ಬೇಸಾಯ, ವ್ಯವಸಾಯದೊಂದಿಗೆ ಕೋಳಿ ಸಾಕಾಣಿಕೆ ಹೀಗೆ ಹಲವಾರು ಬಗೆಯ ಕೃಷಿ ಪದ್ದತಿಯ ಜ್ಞಾನಭಂಢಾರ ಅವರ ಬಳಿ ಇದೆ ಎಂದು ತಿಳಿದುಬರುತ್ತದೆ.
ಹೌದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಪಡೆದು ಪ್ರತಿಯೊಬ್ಬ ರೈತನಿಗೂ ಸ್ಪೂರ್ತಿಯಾಗಬೇಕೆಂಬುದು ಇವರ ಉದ್ದೇಶ. ವರ್ಷಕ್ಕೆ ಒಂದೆರಡು ಬೆಳೆ ತೆಗೆಯುವುದು ಮಾತ್ರ ಮುಖ್ಯವಲ್ಲ, ದಿನನಿತ್ಯ ಹಣ ಬರುತ್ತಿರಬೇಕೆಂಬ ಉದ್ದೇಶದಿಂದ ಕೋಳಿ ಸಾಕಾಣಿಕೆ ಮಾಡಿ ಪ್ರತಿನಿತ್ಯ ಮೊಟ್ಟೆ ಮಾರಾಟ ಮಾಡಿ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.
ಸಾವಯವ ಗೊಬ್ಬರದಿಂದ ಭೂಮಿಯ ಫಲವತ್ತತೆ ಹೆಚ್ಚಿಸಿದ ಸ್ಫೂರ್ತಿದಾಯಕ ಕಥೆ:
ಗುಡ್ಡಗಾಡಿನ ಕಲ್ಲುಮಣ್ಣು ಮಿಶ್ರಿತ ಜಮೀನಿನಲ್ಲಿ ಮರ ಬೆಳೆಸುವುದು ಸುಲಭದ ಮಾತಲ್ಲ. ಹಾಗಾಗಿ, ಮೊದಲಿಗೆ ಕಾಂಪೋಸ್ಟ್, ಎರೆಹುಳು ಮತ್ತು ಹಸಿರೆಲೆ ಗೊಬ್ಬರಗಳಿಂದ, ಜೀವಾಮೃತ ಮತ್ತು ಸೂಕ್ಷ್ಮ ಜೀವಾಣುವಿರುವ ವೇಸ್ಟ್ ಡಿ- ಕಾಂಪೋಸ್ಟ್‌ನಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿದರು. ಮಣ್ಣನ್ನು ಸಡಿಲುಗೊಳಿಸಿ, ತಲಾ ಒಂದು ಮೀಟರ್ ಅಗಲ ಮತ್ತು ಆಳದ ಗುಂಡಿಗಳಲ್ಲಿ ಶೇ.60ರಷ್ಟುಕೆಂಪು ಮಣ್ಣು, ತಲಾ ಶೇ.20ರಷ್ಟುಕಾಂಪೋಸ್ಟ್, ಬೇವಿನ ಹಿಂಡಿಯನ್ನು ಹಾಕಿ ವಿವಿಧ ಗಂಧ ಚಂದನಗಳೇ ಮೊದಲಾದ ಸಸಿಗಳನ್ನು ನಾಟಿ ಮಾಡಿದರು. ಶ್ರೀಗಂಧದ 850 ಸಸಿಗಳನ್ನು ಸಾಲಿನಿಂದ ಸಾಲಿಗೆ 16 ಅಡಿ ಮತ್ತು ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನಾಟಿ ಮಾಡಿದರು.
ಈ ಗಿಡಗಳಲ್ಲಿ ಜೀವಕೂಡಿದಾಗ, ಶ್ರೀಗಂಧ ಮತ್ತು ರಕ್ತಚಂದನ ಸಾಲುಗಳ ಮಧ್ಯೆ ತೊಗರಿ ಬೆಳೆದರು. ಬಳಿಕ ಅಂತರ ಬೆಳೆಯಾಗಿ ಎಲೆಕೋಸು, ಚೆಂಡು ಮತ್ತು ಸೇವಂತಿಗೆ ಹೂವಿನ ಗಿಡಗಳನ್ನು ಬೆಳೆದರು. ನಂತರ ಪ್ಲಾಸ್ಟಿಕ್ ಹೊದಿಕೆಯನ್ನು ಬಳಸಿ ಆಶ್ರಯ ಸಸ್ಯಗಳಾಗಿ ಬದನೆ, ನುಗ್ಗೆ, ಪೇರಲ, ಕಲ್ಲಂಗಡಿ, ನೇರಳೆಯನ್ನೂ ಬೆಳೆಸಿದ್ದಾರೆ. ಈ ಬೆಳೆಗಳೆಲ್ಲಾ ಪರಾವಲಂಬಿಯಾಗಿರುವ ಶ್ರೀಗಂಧದ ಸಸಿಗಳಿಗೆ ಆಶ್ರಯ, ಉತ್ತಮ ಆಹಾರವಾಗಿವೆಯಲ್ಲದೆ, ಹೆಚ್ಚು ತೇವಾಂಶ ಸಂರಕ್ಷಣೆಗೂ ಸಹಕಾರಿಯಾಗಿವೆ.
ಸಧ್ಯ, ಇವರ ಹೊಲದಲ್ಲಿ ಶ್ರೀಗಂಧ, ರತ್ನಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಮಹಾಗಣಿ, ಹೆಬ್ಬೇವು, ಮೋಸಂಬಿ, ಪೇರಲ… ಹೀಗೆ ತರಹೇವಾರಿ ಗಿಡಗಳಿವೆ. ಹಾಗೇ, ಹೊಲದ ಬದುವಿನಲ್ಲಿಯೂ 100 ನಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಪ್ರಸ್ತುತ ಇವು ಒಂದು ವರ್ಷದ ಗಿಡಗಳಾಗಿವೆ. ಗಂಗಾಕಲ್ಯಾಣದ ಕೊಳವೆಬಾವಿಯಿಂದ ಪ್ರತಿ ಎಂಟು ಅಡಿಗೆ ಹನಿ ನೀರಾವರಿ ಪೈಪು ಅಳವಡಿದ್ದಾರೆ. ಪ್ಲಾಸ್ಟಿಕ್ ಮಲ್ಚಿಂಗ್ ಶೀಟ್ ಉಪಯೋಗಿಸಿ 8-10 ದಿನಗಳಿಗೊಮ್ಮೆ ನಿಂಬೆಗಿಡಗಳಿಗೆ ನೀರುಣಿಸುತ್ತಿದ್ದಾರೆ. ಜೊತೆಗೆ ಕೃಷಿ ತ್ಯಾಜ್ಯದಿಂದ ವರ್ಷಕ್ಕೆ 20 ಚೀಲ ಎರೆಹುಳು ಗೊಬ್ಬರ ಉತ್ಪಾದಿಸುತ್ತಿದ್ದಾರೆ. ಜೈವಿಕ ಕೀಟ ನಿಯಂತ್ರಣ ಪದ್ಧತಿಯನ್ನು ಕೂಡ ಅನುಷ್ಠಾನಕ್ಕೆ ತಂದಿದ್ದಾರೆ.
ತಮ್ಮ ಜಮೀನಿನ ಸಮರ್ಪಕ ಬಳಕೆಗಾಗಿ ಕೃಷಿ ಯಂತ್ರೋಪಕರಣಗಳನ್ನು, ಕೀಟ-ರೋಗಗಳ ಹತೋಟಿಗೆ ಸಾವಯವ ಔಷಧಿಗಳನ್ನು, ಹಳದಿ ಅಂಟು ಮತ್ತು ಮೋಹಕ ಬಲೆಗಳನ್ನು, ಜೈವಿಕ ನಿಯಂತ್ರಣಕ್ಕಾಗಿ ಗುಲಗಂಜಿ ಕೀಟಗಳನ್ನು ಉಪಯೋಗಿಸುತ್ತಿರುವುದರಿಂದ ಎಲ್ಲ ಮರಗಳು ಹುಲುಸಾಗಿ ಮತ್ತು ಸಮೃದ್ಧವಾಗಿ ಬೆಳೆದು ಫಲ ನೀಡುತ್ತಿವೆ.
ಹಾಗಾದರೆ, ಇವರ ಆದಾಯದ ಮೂಲದ ಬಗ್ಗೆ ನೋಡುವುದಾದರೆ; ಎಲೆಕೋಸಿನಿಂದ 50,000 ರೂ, ಚೆಂಡು-ಸೇವಂತಿಗೆ ಹೂವಿನಿಂದ 25,000 ರೂ. ಆದಾಯ ಬರುತ್ತಿದೆ. ಸದ್ಯಕ್ಕೆ ಪ್ಲಾಸ್ಟಿಕ್ ಹೊದಿಕೆಯಲ್ಲಿ ಬದನೆ, ಪೇರಲ, ನುಗ್ಗೆ ಬೆಳೆಗಳಿದ್ದು, ಮಾರಾಟಕ್ಕೆ ಸಿದ್ಧವಾಗಿವೆ. ಕಲ್ಲಂಗಡಿಯನ್ನು ಫೆಬ್ರುವರಿಯ ಅಂತ್ಯದಲ್ಲಿ ನಾಟಿ ಮಾಡಿ ಈವರೆಗೆ ಎಕರೆಗೆ 36 ಟನ್ ಇಳುವರಿ ಪಡೆದು ಸುಮಾರು 2 ಲಕ್ಷ ರೂ. ಲಾಭ ಪಡೆದಿದ್ದಾರೆ. ನುಗ್ಗೆ ಕಾಯಿ-ಎಲೆಗಳನ್ನು, ಪೇರಲ ಹಣ್ಣುಗಳನ್ನು, ಮೆಂತ್ಯ, ಪಾಲಕ್, ಕೊತ್ತಂಬರಿ ಸೊಪ್ಪುಗಳನ್ನು ಮತ್ತು ಹಬ್ಬ ಹರಿದಿನಗಳಲ್ಲಿ ಚೆಂಡು- ಸೇವಂತಿಗೆ ಹೂಗಳ ಮಾರಾಟದಿಂದಲೂ ಲಾಭ ಗಳಿಸುತ್ತಿದ್ದಾರೆ.
ಹೌದು, ಲಕ್ಷ್ಮಿಕಾಂತ ಅವರು ತನ್ನ ಪಾಲಿಗೆ ಬಂದ ಬರಡು ಭೂಮಿಯಲ್ಲಿ ಕಾಂಪೋಸ್ಟ್, ಹಸಿರೆಲೆಗೊಬ್ಬರ, ಜೀವಾಮೃತ ಮತ್ತು ಸೂಕ್ಷ್ಮ ಜೀವಾಣುವಿರುವ ವೇಸ್ಟ್-ಡಿ ಕಾಂಪೋಸ್ಟ್ ನಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಫಲರಾಗಿದ್ದಾರೆ. ಮಣ್ಣನ್ನು ಸಡಿಲಗೊಳಿಸಿ ತಲಾ ಒಂದು ಮೀಟರ್ ಅಂಗಲ ಮತ್ತು ಆಳದ ಗುಂಡಿಗಳಲ್ಲಿ ಶೇ. 60 ರಷ್ಟು ಕೆಂಪು ಮಣ್ಣು, ತಲಾ ಶೇ. 20 ರಷ್ಟು ಕಾಂಪೋಸ್ಟ್, ಬೇವಿನ ಹಿಂಡಿಯನ್ನು ಸೇರಿಸಿದ್ದಾರೆ. ಹಾಗೆಯೇ, ಕೋಳಿ ಗೊಬ್ಬರವನ್ನು ಸಹ ವ್ಯವಸಾಯಕ್ಕೆ ಬಳಸಿ ಫಲವತ್ತತೆ ಹೆಚ್ಚಿಸಿದ್ದಾರೆ. ಶ್ರೀಗಂಧ, ರಕ್ತಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಹೆಬ್ಬೇವು, ಪೇರಲ ಹೀಗೆ ಬಗೆಬಗೆಯ ಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡಗಳ ಮಧ್ಯದಲ್ಲೇ ಮಿಶ್ರಬೆಳೆ ಹಾಕಿ ಕೈ ತುಂಬಾ ಸಂಪಾದನೆ ಮಾಡುತ್ತಾರೆ. ಗಿಡಗಳ ಮಧ್ಯದಲ್ಲಿ ಚೆಂಡುಹೂವು, ಎಲೆಕೋಸು, ಬದನೆಕಾಯಿ, ಸೇವಂತಿಗೆ, ಕಲ್ಲಂಗಡಿ ಅಂತರ ಬೆಳೆ ಹಾಕಿದ್ದಾರೆ. ನೆರಳೆ, ಹೆಬ್ಬೇವು ಪೇರಲ ಜೊತೆ ಜೊತೆಗೆ ವರ್ಷದೊಳಗೆ ಆದಾಯ ತರುವ ನಿಂಬೆ, ನುಗ್ಗೆ, ಬದನೆ ಮತ್ತಿತರ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೀಟ-ರೋಗಗಳ ಹತೋಟಿಗೆ ಸಾವಯವ ಔಷಧಿಗಳನ್ನು ಬಳಸುತ್ತಾರೆ. ರಾಸಾಯನಿಕ ಮುಕ್ತ ತರಕಾರಿ, ಬೆಲೆ ಹಾಗೂ ಹಣ್ಣು-ಹಂಪಲುಗಳನ್ನ ಬೆಳೆಯುತ್ತಿರುವುದು ವಿಶೇಷ.
ಇವರಿಗೆ ಆರಂಭದ ಹಂತದಲ್ಲಿ ಆದಾಯದ ಮೂಲವಾಗಿದ್ದು,
ಕಲ್ಲಂಗಡಿ 2 ಲಕ್ಷ, ಚೆಂಡುಹೂವು 30 ಸಾವಿರ, ಬದನೆಕಾಯಿ 30 ಸಾವಿರ, ನುಗ್ಗೆ 50 ಸಾವಿರ, ಪೇರಲ ಹಣ್ಣು 20 ಸಾವಿರ ಹೀಗೆ ಒಂದು ವರ್ಷಕ್ಕೆ ಸುಮಾರು 3.30ಲಕ್ಷ ನಿವ್ವಳ ಲಾಭ ಪಡೆದಿದ್ದಾರೆ.
ಜೀವನಪರ್ಯಂತ ಆದಾಯದ ಮೂಲಗಳು:
ಶ್ರೀಗಂಧ, ಹೆಬ್ಬೇವು, ಬೆಟ್ಟದ ನೆಲ್ಲಿ, ನೇರಳೆ ಗಿಡಗಳಿಂದ ಮೂರ್ನಾಲ್ಕು ವರ್ಷಗಳ ನಂತರ ನಿರಂತರವಾಗಿ ಜೀವನಪರ್ಯಂತ ಲಾಭ ಕೊಡುತ್ತದೆ. “ನಿರಂತರವಾಗಿ ಹಣ ಬರಬೇಕು, ಜೊತೆಗೆ ಮಿಶ್ರ ಬೆಳೆಯೂ ಆಗಬೇಕೆಂಬ ಉದ್ದೇಶದಿಂದಲೇ ಅರಣ್ಯ ಆಧಾರಿತ ಕೃಷಿ ಪದ್ಧತಿ ಅನುಸರಿಸಿದ್ದೇನೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ಲಕ್ಷ್ಮೀಕಾಂತ ಹಿಬಾರೆ.
“ಅರಣ್ಯ ಆಧಾರಿತ ಕೃಷಿ ಮಾಡಲು ಜಾಸ್ತಿ ಹಣ ಬೇಕಾಗಿಲ್ಲ. ಆದರೆ ಸಾಕಷ್ಟು ತಾಳ್ಮೆ ಅತ್ಯಗತ್ಯ. ರೈತರು ಪೇರಲೆ, ನೇರಳೆ, ನಿಂಬೆ ಇಂತಹ ಬೆಳೆಗಳ ಜೊತೆಗೆ ನುಗ್ಗೆ, ತರಕಾರಿ ಮತ್ತಿತರ ಮಿಶ್ರಬೆಳೆಗಳನ್ನೂ ಬೆಳೆಯಬಹುದು. ತೋಟಗಾರಿಕಾ ಬೆಳೆಗಳನ್ನು ಬೆಳೆದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ ಎಂಬ ತಪ್ಪುಕಲ್ಪನೆ ಸಾಕಷ್ಟು ರೈತರಲ್ಲಿದೆ. ಕಡಿಮೆ ಭೂಮಿಯಲ್ಲಿ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದು” ಎನ್ನುತ್ತಾರೆ ಲಕ್ಷ್ಮೀಕಾಂತ ಹಿಬಾರೆ. ಇವರ ಈ ಯಶಸ್ವಿ ಅರಣ್ಯ ಕೃಷಿ ಪದ್ದತಿಯ ಅಳವಡಿಕೆ ಪ್ರತಿಯೊಬ್ಬ ರೈತನಿಗೂ ಸ್ಫೂರ್ತಿಯಾಗಿದೆ.
ಇದನ್ನು ಓದಿ … ಸಹಜ ಕೃಷಿಯಲ್ಲಿ ಕಳೆ ನಿರ್ವಹಣೆ ! Weed management in organic farming
ದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ.